ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ರಾತ್ರಿ ಸಮಯ ಸುರಿಯುತ್ತಿರುವ ಮಳೆಯಿಂದ (Rain) ಜಿಲ್ಲೆಯಲ್ಲಿ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದೆ.
ಅದರಲ್ಲೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ತೊರೆನೂರು, ಅಳುವಾರ, ಸಿದ್ಧಲಿಂಗಪುರ, 6ನೇ ಹೊಸಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ಜೋಳ ಬೆಳೆದ ರೈತರಿಗೆ ಸಂಕಷ್ಟ ಬಂದಿದೆ.
ಹೌದು. ಈ ಭಾಗದ ರೈತರು ಸಾವಿರಾರು ಎಕ್ರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯುವದು ರೂಢಿ. ಇನ್ನೇನು ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲಿ ಅಕಾಲಿಕ ಮಳೆಗೆ ಹಾನಿಯಾಗಿದೆ. ರಾತ್ರಿ ಮಳೆಗೆ ಅಪಾರ ಪ್ರಮಾಣದ ಜೋಳದ ಬೆಳೆ ನೆಲ ಕಚ್ಚಿವೆ.
ನೆಲಕ್ಕುರುಳಿರುವ ಜೋಳದ ಕಾಳುಗಳು ಮಳೆಯಿಂದ ಮೊಳಕೆಯೊಡೆಯುತ್ತಿವೆ. ಇದರಿಂದಾಗಿ ಜೋಳದ ತೂಕ ಕಡಿಮೆಯಾಗುತ್ತಿದೆ. ಅಲ್ಲದೇ ಮೊಳಕೆ ಬಂದ ಜೋಳ ಖರೀದಿಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ಕ್ವಿಂಟಲ್ ಜೋಳ 1,200 ರಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.
ಜೋಳ ಸೇರಿದಂತೆ ಶುಂಠಿ, ಅಡಿಕೆ, ಮೆಣಸು ಬೆಳೆಗಳೂ ಸಹ ಕೊಳೆಯುವ ಹಂತಕ್ಕೆ ತಲುಪಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ನೂರಾರು ರೈತರು ಆಗ್ರಹಿಸಿದ್ದಾರೆ.



