– ಮೂರು ಮಕ್ಕಳ ಶಿಕ್ಷಣದ ಜೊತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದ ದೇವದಾಸಿ ಮಹಿಳೆಯ ಬದುಕಿನ ಕಥೆ!
ಪವಿತ್ರ ಕಡ್ತಲ, ಪಬ್ಲಿಕ್ ಟಿವಿ
ಎಲ್ಲಿಂದ ಆರಂಭಿಸಲಿ ಇಂದು ಭೇಟಿಯಾದ ಬಟ್ಟಲುಕಂಗಳ ತಿಳಿ ಹಸಿರ ಸೀರೆಯುಟ್ಟ ಆಕೆಯ ಕಥೆಯನ್ನು..!? ಆಕೆಯ ಕಣ್ಣೀರ ಕಥೆ ನಿಮ್ಮ ಮುಂದಿಡಲಾ, ದೇವದಾಸಿಯಾಗಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು, ಬದುಕಿಡಿ ದಣಿದು ಹೋದ ಜೀವ ಈಗ ಹೊಸ ಬದುಕನ್ನು ಕಟ್ಟಿಕೊಂಡ ಬಗೆ ಹೇಳೋದಾ..!? ಅಥವಾ ತನ್ನ ರಕ್ತ ಹಂಚಿಕೊಂಡು ಬಂದ ಮೂರು ಮಕ್ಕಳಿಗೂ ಶಿಕ್ಷಣ ಕೊಟ್ಟು, ತಾನು ಓದುತ್ತಿರುವ ಆಕೆ ಪಡುತ್ತಿರುವ ಶ್ರಮದ ಕಥೆ ಹೇಳೋದಾ.! ಅಥವಾ ಅವಳ್ಯಾರದ್ದೋ ಜೊತೆ ಈಗಲೂ ಹೋಗುತ್ತಿದ್ದಾಳೆ ಬಿಡು ಅಂತಾ ಆಕೆಯ ಬೆನ್ನ ಹಿಂದೆ ಆಡಿಕೊಳ್ಳುವ ಕೆಲ ಘಾತುಕ ಕೆಟ್ಟ ಮನಸುಗಳ ಬಗ್ಗೆ ಧಿಕ್ಕಾರ ಹೇಳುತ್ತಾ ಆಕೆಯ ಕಥೆ ಶುರುಮಾಡಿಬಿಡೋದಾ..! ಆ ಗೋಳಿನ ಕಥೆ ಅಂತಾ ಓದದೇ ಇರಬೇಡಿ, ಈ ದೇವದಾಸಿಯ ಕಥೆ ನಮ್ಮ ನಿಮ್ಮ ಬದುಕನ್ನು ಬದಲಾಯಿಸಿಬಿಡಬಹುದು, ನೆಮ್ಮದಿಯ ಬದುಕು ಕಟ್ಟಿಕೊಂಡ ಮೇಲೂ ಸಣ್ಣ ಅಸಹನೆ, ಬದುಕಿನ ಮೇಲೆ ಬೇಸರದ ಭಾವವನ್ನು ತೊಡೆದುಹಾಕಬಹುದು. ಗೆದ್ದೇ ಗೆಲ್ಲುವೆ ಒಂದು ದಿನ ಅಂತಾ ಮೈಕೊಡವಿ ಎದ್ರೆ ಯಶಸ್ಸು ಕಾಲಬುಡಕ್ಕೆ ಬಂದೇ ಬರುತ್ತದೆ ಬಿಡು ಅನ್ನುವ ಆತ್ಮವಿಶ್ವಾಸವನ್ನು ಹುಟ್ಟಿಹಾಕಬಹುದು. ಹಾಗಾಗಿ ಕೇಳಿಸಿಕೊಂಡು ಬಿಡಿ..!
ಹೆಸರು ಊರನ್ನು ಆಕೆಯ ಮನವಿ ಮೇರೆಗೆ ಅನಿವಾರ್ಯವಾಗಿ ಮರೆಮಾಚುತ್ತಿದ್ದೇನೆ.
SSLC ಮುಗೀತಷ್ಟೇ, ಕಾಲೇಜು ಹೋಗುವ ಕನಸು ಹೊತ್ತ ಹೆಣ್ಣುಮಗಳವಳು, ಕಡುಬಡುತನ ಇದ್ರೂ ನೆಮ್ಮದಿಗೆ ಕೊರತೆ ಇರಲಿಲ್ಲ. ಅಪ್ಪ-ಅಮ್ಮ ಜೊತೆಗೆ ಅಣ್ಣ-ತಮ್ಮ ಸಹೋದರಿಯರ ಜೊತೆ ಬದುಕು ಚಂದ ಅನಿಸುವಾಗಲೇ ಸಹೋದರರು ಇಬ್ರೂ ಆಕಸ್ಮಿಕವಾಗಿ ಮೃತಪಟ್ರು. ಈಕೆಯ ತಾಯಿ ಮಾನಸಿಕವಾಗಿ ಕುಸಿದುಹೋದ್ರು. ಕುಟುಂಬದ ನೆಮ್ಮದಿ ಹಾರಿಹೋಯ್ತು. ಮನೆ ಸ್ಮಶಾನವಾಯಿತು. ಐದು ಮಕ್ಕಳನ್ನು ಸಂಭಾಳಿಸುತ್ತಿದ್ದ ತಾಯಿ ಎರಡು ಮಕ್ಕಳನ್ನು ಕಳೆದುಕೊಂಡು ಮಾನಸಿಕವಾಗಿ ಅಘಾತಕ್ಕೆ ಒಳಗಾದ್ರು. ದೇವರ ಮುನಿಸು ಕಡಿಮೆಯಾಗಲಿ ಅನ್ನುವ ಮೂಢನಂಬಿಕೆಯ ಕಾರಣಕ್ಕೋ ಏನೋ ಗೊತ್ತಿಲ್ಲ ಆಕೆಯನ್ನು ಕುಟುಂಬಸ್ಥರೇ ಸೇರಿ ದೇವದಾಸಿ ಪದ್ಧತಿಗೆ ತಳ್ಳಿಬಿಟ್ರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ
ಅದಾದ ಮೇಲೆ ಅಕ್ಷರಶಃ ನರಕದ ಬದುಕು. ಅಲ್ಲಿ ಆಕೆಗೆ ಜೊತೆಗಾರನ ಆಯ್ಕೆ ಮಾಡಲು ಅವಕಾಶ ನೀಡಿದ್ದಾರೆ. ಆದ್ರೇ ಮದುವೆ ಮಾತ್ರ ನಿಷಿದ್ಧ. ಆತ ಯಾವಾಗ ಬೇಕಾದ್ರೂ ಈಕೆಯನ್ನು ಬಿಟ್ಟು ಹೋಗಬಹುದು. ಎರಡು ಮಕ್ಕಳು ಭೂಮಿಗೆ ಬಂದ ಮೇಲೆ ಇನ್ನೊಂದು ಮಗು ಹೊಟ್ಟೆಯಲ್ಲಿ ಇರುವಾಗಲೇ ಈಕೆಯನ್ನು ಬಿಟ್ಟು ಆತ ಬೇರೆ ಹೋಗಿದ್ದಾನೆ. ಮೂರನೇ ಮಗು ಡೆಲಿವರಿಯಾದಾಗ, ಬಾಣಂತಿಗೆ ತಿನ್ನೋಕೆ ಗಂಜಿಯೂ ಇರಲಿಲ್ಲ. ಸಾಕು ಸಾಕು ಇಲ್ಲಿಗೆ ಈ ನರಕದ ಬದುಕು ಅಂತಾ ಅಂದುಕೊಂಡಿದ್ದಾಳೆ. ಆದರೆ, ಮಕ್ಕಳ ಮುಗ್ಧ ಮುಖ ನೆನಪಾಗಿ ಬದುಕು ಸಾಗಿಸುವ ಜಿದ್ದಿಗೆ ಬಿದ್ದಿದ್ದಾಳೆ. ಜಸ್ಟ್ 20 ದಿನಕ್ಕೆ ಹಸಿ ಬಾಣಂತಿ ಮಕ್ಕಳನ್ನು ಸಾಕಲು ಕೆಲ್ಸ ಹುಡುಕಿದ್ದಾಳೆ. ಈಕೆಯ ಪುಣ್ಯಕ್ಕೆ NGO ದಲ್ಲಿ ಕೆಲಸ ಸಿಕ್ಕಿದೆ. ಅಲ್ಲಿಗೆ ಮುಗಿಯಲ್ಲ ಬದುಕಿನ ಕಥೆ. ಅಲ್ಲಿಯೂ ಜನರ ಹೀಯಾಳಿಕೆ, ಆಕೆ ಎಲ್ಲಿ ಕೆಲ್ಸಕ್ಕೆ ಹೋಗ್ತಾಳೆ, ಮೈಮಾರಿ ಬದುಕುತ್ತಾಳೆ ಅಂತಾ ಹೆಜ್ಜೆ ಹೆಜ್ಜೆಗೂ ಆಕೆಯನ್ನು ಅನುಮಾನಿಸುವ, ಅಪಮಾನಿಸುವ ಜನ. ಛೀ ಥೂ ಅಂದ್ರು ಮಕ್ಕಳಿಗಾಗಿ ಅದೆಲ್ಲವನ್ನು ನುಂಗಿದ್ದಾಳೆ. ಈಗ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದಾಳೆ.
ದೇವದಾಸಿಯಿಂದ ಹೊರ ಬಂದು ಅಪ್ಪ-ಅಮ್ಮನ ಸಾಕೋಕೆ ನಿಂತಿದ್ದಾಳೆ. ಅದಾದ ಮೇಲೆ ನನ್ನನ್ನು ಹೀಗಳೆದ ಸಮಾಜಕ್ಕೆ ಶಿಕ್ಷಣದಿಂದಲೇ ಉತ್ತರ ಕೊಡಬೇಕು ಅಂತಾ ಅನಿಸಿದೆ. ಮಕ್ಕಳನ್ನು ಓದಿಸುತ್ತಲೇ, ತಾನು ಹತ್ತು ವರ್ಷದ ಗ್ಯಾಪ್ ಬಳಿಕ ಪಿಯುಸಿ ಬರೆದಿದ್ದಾಳೆ. ಊಹೂ ಎಲ್ಲಾ ಸಬ್ಜೆಕ್ಟ್ ಫೇಲೂ..! ಮತ್ತೆ ಪರೀಕ್ಷೆ ಆಗ್ಲೂ ಫೇಲ್..! ಪೆಟ್ಟು ತಿಂದ ಜೀವಕ್ಕೆ ಛಲ ಕೊಂಚ ಹೆಚ್ಚೇ ಇರುತ್ತದೆ. ಮೂರನೇ ಸಲಕ್ಕೆ ಪಿಯುಸಿ ಪಾಸ್. ರಿಸಲ್ಟ್ ನೋಡಿ ಪುಟ್ಟ ಮಕ್ಕಳಂತೆ ಕುಣಿದಾಡಿದ್ದಾಳೆ. ಮಕ್ಕಳು ಅಮ್ಮನ ಖುಷಿ ಕಂಡು ಚಪ್ಪಾಳೆ ತಟ್ಟಿದ್ದಾರೆ. ಆಕೆ ಎಲ್ಲಿ ಪಾಸಾಗ್ತಾಳೆ, ಅಂತಾ ಎರಡು ಬಾರಿ ಪಿಯುಸಿ ಫೇಲ್ ಆಗಿದ್ದಾಗ ಪಕಪಕನೇ ನಕ್ಕಿದ್ದ ಊರವರು ಗಪ್ ಚುಪ್. ಆಕೆಯನ್ನು ಆಡಿಕೊಂಡ ಕೆಲವ್ರು ಪಿಯುಸಿ ಪಾಸಾದಾಗ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕ್ಕೊಂಡು ಕಂಗ್ರಾಟ್ಸ್ ಅಂದರಂತೆ.
ಹೂಂ.. ಸರಿ ಸಾಕಪ್ಪ, ಇಷ್ಟು ಅಂತಾ ಸುಮ್ಮನಾಗಿಲ್ಲ ಈಕೆ.! ಡಿಗ್ರಿ ಓದಬೇಕು ಅಂತಾ ಮನಸಾಗಿದೆ. ಈಗ ನಾಲ್ಕನೇ ಸೆಮಿಸ್ಟರ್. ಕನಸು ಕಂಡು ನನಸು ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದಾಳೆ. ಒಂದು ಹೊತ್ತಿನ ಊಟಕ್ಕೆ ಕಷ್ಟ, ಮಕ್ಕಳನ್ನು ಓದಿಸುವ ಜವಾಬ್ದಾರಿ, ಇಷ್ಟೆಲ್ಲ ಇರುವಾಗಲೂ ಎಲ್ಲಿಂದ ಬರುತ್ತದೇ ಈ ಧೈರ್ಯ, ಓದುವ ಹಂಬಲ ಅಂತಾ ಕುತೂಹಲಕ್ಕೆ ಕೇಳಿದೆ. ನನ್ನ ಮಕ್ಕಳಿಗಾಗಿ ಅಂತಾ ಉತ್ತರ ರಪ್ ಅಂತಾ ಬಂತು. ನಾಳೆ ಈ ಸಮಾಜ ನನ್ನ ಮಕ್ಕಳಿಗೆ ನಿಮ್ಮ ಅಪ್ಪ ಎಲ್ಲಿ, ನಿಮ್ಮಮ್ಮ ಏನು ಮಾಡ್ಕೊಂಡಿದ್ಲು ಗೊತ್ತಾ ಅಂತಾ ನನ್ ಮಕ್ಕಳಿಗೆ ವ್ಯಂಗ್ಯ ಪ್ರಶ್ನೆ ಕೇಳುತ್ತೆ. ಆಗ ನನ್ ಮಕ್ಕಳು, ನಮಗೆ ಅಮ್ಮಾನೇ ಎಲ್ಲಾ, ಅಮ್ಮ ಹಿಂದೆ ದೇವದಾಸಿಯಾಗಿರಬಹುದು, ಆದ್ರೇ ಈಗ ಪಿಯುಸಿ ಬರೆದು ಬಿಎ ಓದಿದ್ದಾರೆ ಗೊತ್ತಾ ಅಂತಾ ಹೆಮ್ಮೆಯಿಂದ ದಿಟ್ಟತನದಿಂದ ಮಾತಾನಾಡಬೇಕು, ಅಲ್ಲಿಗೆ ನನ್ನ ಬದುಕು ಸಾರ್ಥಕ. ಅಬ್ಬಾ ಈ ಸಮಾಜ ಈ ತಾಯಿಯ ಬದುಕನ್ನು ಎಷ್ಟೇ ಅವಮಾನಿಸಿದ್ರೂ, ಆಕೆಯ ಮಕ್ಕಳು ಎಂದೂ ಅನುಮಾನಿಸದೇ ಇರಲಿ ದೇವರೇ ಅಂತಾ ಪ್ರಾರ್ಥಿಸಿಕೊಂಡೆ. ಇದನ್ನೂ ಓದಿ: ಶಾಲಾ ಕಟ್ಟಡ ಕುಸಿದು 4 ಮಕ್ಕಳ ದಾರುಣ ಸಾವು – ಅವಶೇಷಗಳ ಅಡಿ ಸಿಲುಕಿದ 60 ಮಕ್ಕಳು
ವಿಚಿತ್ರ ಗೊತ್ತಾ, ಶಿಕ್ಷಣದಿಂದ ಬದುಕು ಬದಲಾಯಿಸಬಹುದು ಅಂತಾ ಸರಸ್ವತಿಯ ಹಿಂದೆ ಹೊರಟ ಈ ಜೀವವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ‘ಉನ್ನತ’ ಶಿಕ್ಷಣ ಪಡೆದ ಅಧಿಕಾರಿಗಳು ಮಾತ್ರ ಆದ್ಯಾಗೆ ಕಡೆಗಣಿಸುತ್ತಿದ್ದಾರೆ ಗೊತ್ತಾ? ಒಂದು ವರ್ಷದಿಂದ ಈಕೆಯ ಮಗಳಿಗೆ ವಸತಿ ಶಾಲೆಯಲ್ಲಿ ಸೀಟು ಕೊಡುತ್ತಿಲ್ವಂತೆ. ಅಲೆದಾಡಿಸುತ್ತಿದ್ದಾರೆ ಪಾಪ.! ಈಕೆಯನ್ನು ಚೇಂಬರ್‌ನಲ್ಲಿ ಕರೆದುಕೊಂಡು ಕೂರಿಸಿ ನಿನ್ನ ಬದುಕೇ ಒಂದು ಪ್ರೇರಣೆ, ಕರೆದುಕೊಂಡು ಬಾ ನಿನ್ನ ಮಗಳನ್ನು ಚೆನ್ನಾಗಿ ಓದಲಿ ಅಂತಾ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಾಗಿತ್ತು. ಆದ್ರೆ, ಅಧಿಕಾರಿಗಳು ಈ ಹೆಣ್ಣುಮಗಳನ್ನು ಒಂದು ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಹೇಗಾದ್ರೂ ಅಧಿಕಾರಿಗಳನ್ನು ಕಾಂಟೆಕ್ಟ್ ಮಾಡಿ ಸೀಟು ಕೊಡಿಸುವ ಭರವಸೆಯನ್ನು ಕೊಟ್ಟು ಬಂದಿದ್ದೇನೆ. ಆಕೆಯ ಬದುಕು, ಆಕೆಯ ಮಕ್ಕಳ ಬದುಕು ಚೆನ್ನಾಗಿರಲಿ ದೇವರೆ. ಅಮ್ಮನ ಕಷ್ಟ, ಸೆಣಸಾಟದ ಇಡೀ ಬದುಕನ್ನು ಮಕ್ಕಳು ಗೌರವಿಸಲಿ, ಅನ್ನೋದಷ್ಟೇ ನನ್ನ ಪ್ರಾರ್ಥನೆ.