ಒಂದು ಪಂದ್ಯದಲ್ಲಿ 2 ವಿಶ್ವದಾಖಲೆ ನಿರ್ಮಾಣ – ಪಾಂಡ್ಯ ಹಿಂದಿಕ್ಕಿದ ಹೀಲಿ

Public TV
2 Min Read
Alyssa Healy

ಮೆಲ್ಬರ್ನ್: ಭಾರತದ ವಿರುದ್ಧ ಫೈನಲ್ ಪಂದ್ಯದಲ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ಆಸ್ಟ್ರೇಲಿಯಾಗೆ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲೀಸಾ ಹೀಲಿ 2 ವಿಶ್ವಕಪ್ ದಾಖಲೆ ನಿರ್ಮಿಸಿದ್ದಾರೆ.

ಇಂದಿನ ಪಂದ್ಯದಲ್ಲಿ ಅಲೀಸಾ 30 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ್ದರು. ಈ ಮೂಲಕ ಯಾವುದೇ ಐಸಿಸಿ(ಪುರುಷ/ಮಹಿಳಾ) ಆಯೋಜಿಸುತ್ತಿರುವ ಫೈನಲಿನಲ್ಲಿ ಅತಿ ವೇಗದ ಅರ್ಧಶತಕ ಸಿಡಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅಲೀಸಾ ಪಾತ್ರರಾಗಿದ್ದಾರೆ.

30 ಎಸೆತಗಳ ಪೈಕಿ 40 ರನ್ ಸಿಕ್ಸರ್, ಬೌಂಡರಿ(7 ಬೌಂಡರಿ 2 ಸಿಕ್ಸರ್) ಮೂಲಕ ಬಂದಿತ್ತು. ಈ ಮೊದಲು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಪಾಂಡ್ಯ 32 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು.

ಹಾಗೆ ನೋಡಿದರೆ 1999ರ ವಿಶ್ವಕಪ್ ಫೈನಲಿನಲ್ಲಿ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಆಡಂ ಗಿಲ್‍ಕ್ರಿಸ್ಟ್, 2016ರ ವಿಶ್ವಕಪ್ ಟಿ20ಯಲ್ಲಿ ಇಂಗ್ಲೆಂಡಿನ ಜೋ ರೂಟ್, 2014ರ ಟಿ20 ವಿಶ್ವಕಪ್‌ನಲ್ಲಿ ಸಂಗಕ್ಕಾರ 33 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದರು. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಶಫಾಲಿ ವರ್ಮಾ, ಸಂತೈಸಿದ ಹರ್ಮನ್ ಪ್ರೀತ್ – ವಿಡಿಯೋ ವೈರಲ್

ಅರ್ಧಶತಕದ ದಾಖಲೆಯ ಜೊತೆ ಸ್ಟ್ರೈಕ್ ರೇಟ್ ನಲ್ಲೂ ಹೀಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅಲೀಸಾ ಹೀಲಿ ಇಂದು 192.30 ಸ್ಟ್ರೈಕ್ ರೇಟ್‍ನಲ್ಲಿ 75 ರನ್(39 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದಿದ್ದಾರೆ. ಇದಕ್ಕೂ ಮುನ್ನ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಪಾಂಡ್ಯ 176.74 ಸ್ಟ್ರೈಕ್ ರೇಟ್‍ನಲ್ಲಿ 76 ರನ್(43 ಎಸೆತ, 4 ಬೌಂಡರಿ, 6 ಸಿಕ್ಸರ್) ಹೊಡೆದಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾದ ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಮೊದಲ ವಿಕೆಟಿಗೆ ಶತಕದ ಜೊತೆಯಾಟವಾಡಿದ ಪರಿಣಾಮ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತ್ತು. ಅಲೀಸಾ ಹೀಲಿ ಮತ್ತು ಬೆಥ್ ಮೂನಿ ಮೊದಲ ವಿಕೆಟಿಗೆ 70 ಎಸೆತಗಳಲ್ಲಿ 115 ರನ್ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಅಲೀಸಾ ಹೀಲಿ 79 ರನ್(39 ಎಸೆತ) ಹೊಡೆದಿದ್ದರೆ ಬೆಥ್ ಮೂನಿ 38 ರನ್(32 ಎಸೆತ) ಬಾರಿಸಿದ್ದರು. ಅತ್ಯುತ್ತಮವಾಗಿ ಆಡಿದ್ದಕ್ಕೆ ಅಲೀಸಾ ಹೀಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ ಬೆಥ್ ಮೂನಿ ಸರಣಿ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಭಾರತ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಫೈನಲ್

ಅಲೀಸಾ ಹೀಲಿ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಪತ್ನಿಯಾಗಿದ್ದಾರೆ. ವಿಶೇಷ ಏನೆಂದರೆ ಆಸ್ಟ್ರೇಲಿಯಾ ತಂಡ ಫೈನಲ್ ಪ್ರವೇಶಿಸಿದ್ದು ತಿಳಿಯುತ್ತಿದ್ದಂತೆ ಸ್ಟಾರ್ಕ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಫೈನಲ್ ಪಂದ್ಯವನ್ನು ಆಡದೇ ಪತ್ನಿಯನ್ನು ಪ್ರೋತ್ಸಾಹಿಸಲು ತವರಿಗೆ ಮರಳಿದ್ದರು. ವಿಶೇಷ ಏನೆಂದರೆ 2015ರಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ಸೋಲಿಸಿ 5ನೇ ಬಾರಿ ವಿಶ್ವಕಪ್ ಎತ್ತಿಕೊಂಡಿತ್ತು. ಈ ಸರಣಿಯಲ್ಲಿನ ಅತ್ಯುತ್ತಮ ಆಟಕ್ಕಾಗಿ ಸ್ಟಾರ್ಕ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *