ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ (Malavika Avinash) ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆ (Hospital) ಬೆಡ್ ಮೇಲೆ ಮಲಗಿಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು ತಮಗಾದ ಆರೋಗ್ಯ ಸಮಸ್ಯೆಯನ್ನೂ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಅಲ್ಲದೇ, ಈ ರೀತಿ ಸಮಸ್ಯೆಯಾದಾಗ ನೆಗ್ಲೆಟ್ ಮಾಡಬೇಡಿ ಎಂದು ಸಲಹೆಯನ್ನೂ ಅವರು ನೀಡಿದ್ದಾರೆ.
ಮಾಳವಿಕಾ ಮೈಗ್ರೇನ್ (Migraine) ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಇದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಅವರು ಹೇಳಿದ್ದಾರೆ. ಕೇವಲ ತಲೆನೋವು ಅಂದುಕೊಂಡು ತಾತ್ಸಾರ ಮಾಡಿದರೆ, ನನ್ನ ರೀತಿಯಲ್ಲೇ ನೀವು ಆಸ್ಪತ್ರೆಯಲ್ಲಿ ಮಲಗಬೇಕಾಗುತ್ತದೆ ಎಂದು ಸಣ್ಣ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.
ಮೈಗ್ರೇನ್ ಸಮಸ್ಯೆಯನ್ನು ಹೇಳಿಕೊಂಡು ಆಸ್ಪತ್ರೆಯ ಬೆಡ್ ನಿಂದ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮಾಳವಿಕಾ, ಚೇತರಿಸಿಕೊಳ್ಳುತ್ತಿರುವ ಕುರಿತು ಹಂಚಿಕೊಂಡಿದ್ದಾರೆ. ಮಾಳವಿಕಾ ಹಾಕಿರುವ ಫೋಟೋ ಅವರದ್ದಾ ಅನ್ನುವ ಅನುಮಾನ ಮೂಡಿಸುವಷ್ಟು ಮುಖ ಬದಲಾಗಿದೆ. ಇದನ್ನೂ ಓದಿ: ಮದುವೆ ಆಗುವ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ
ಮಾಳವಿಕಾ ಬೇಗ ಚೇತರಿಸಿಕೊಂಡು ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಾಕಷ್ಟು ಧಾರಾವಾಹಿ ಸಿನಿಮಾ ಮಾಡಿರುವ ಇವರು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.