ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನ ನಾನಾ ದಾರಿಗಳನ್ನ ಹುಡುಕಿಕೊಳ್ಳುತ್ತಿದ್ದಾರೆ. ತಲೆಗೆ ಟೋಪಿ ಹಾಕಿಕೊಳ್ಳುವ ಜೊತೆಗೆ ತಮ್ಮ ವಾಹನಗಳಿಗೂ ಟೋಪಿ ಹಾಕಿ ಸವಾರಿ ಮಾಡುತ್ತಿದ್ದಾರೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಿಸುತ್ತಿದ್ದಾರೆ.
Advertisement
ರಾಯಚೂರು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ರೂಪ ತಮ್ಮ ಮೊಪೆಡ್‍ಗೆ ಕ್ಯಾಪ್ ಹಾಕಿ ಗಾಡಿ ಓಡಿಸ್ತಿದ್ದಾರೆ. ಜವಾಹರ್ ನಗರದ ನಿವಾಸಿಯಾಗಿರುವ ಡಾ.ರೂಪ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ತಮ್ಮ ಮೊಪೆಡ್‍ಗೆ ಸಮ್ಮರ್ ಪ್ರೂಫ್ ಕ್ಯಾಪ್ ಹಾಕಿಸಿದ್ದಾರೆ. ಇದರಿಂದ ಬಿಸಿಲಿನ ಝಳದಿಂದ ರಕ್ಷಣೆ ಸಿಗುತ್ತಿದೆ. ಜೊತೆಗೆ ಎರಡು ಕಡೆ ತೆರೆದಿರುವುದರಿಂದ ಗಾಳಿಯೂ ಸಿಗುತ್ತಿದೆ. ಸನ್ ಸ್ಟ್ರೋಕ್, ಸ್ಕಿನ್ ಟ್ಯಾನಿಂಗ್, ಡಿಹೈಡ್ರೇಷನ್, ಗ್ಲೂಕೋಸ್ ಕೊರತೆ ಹಾಗೂ ವಾಹನಕ್ಕೂ ಬಿಸಿಲು ತಟ್ಟದಂತೆ ತಡೆಯಲು ರೂಪಾ ಈ ಮಾರ್ಗವನ್ನ ಕಂಡುಕೊಂಡಿದ್ದು, ಇತರರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕ್ಯಾಪ್‍ಗಾಗಿ ಅವರು ಕೇವಲ 1700 ರೂಪಾಯಿ ಖರ್ಚು ಮಾಡಿದ್ದಾರಂತೆ.
Advertisement
Advertisement
ರಾಯಚೂರಿನಲ್ಲಿ ತಾಪಮಾನ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಸಂಜೆಯಾದ್ರೂ ಬಿಸಿಗಾಳಿ ಬೀಸುತ್ತಿದೆ. ಬೆಳಿಗ್ಗೆ 8 ಗಂಟೆಗೆ ಬಿಸಿಲಿನ ಝಳ ಆರಂಭವಾಗುತ್ತಿದೆ. ಹೀಗಾಗಿ ಮಣ್ಣಿನ ಗಡಿಗೆ, ಕಬ್ಬಿನ ಹಾಲು, ತೆಂಗಿನ ಎಳೆನೀರಿನ ವ್ಯಾಪಾರ ಜೋರಾಗಿದೆ. ಜನ ಬಿಸಿಲಿನಿಂದ ಉಂಟಾಗುವ ನಿರ್ಜಲೀಕರಣದಿಂದ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆಲವರು ಕೊಡೆಗಳನ್ನ ಹಿಡಿದು ಮನೆಯಿಂದ ಹೊರಬಂದ್ರೆ ಬಹುತೇಕರು ಟೋಪಿ ಹಾಕಿಕೊಂಡು ಹೊರಬರುತ್ತಿದ್ದಾರೆ.
Advertisement
ಒಟ್ಟಿನಲ್ಲಿ, ಕನಿಷ್ಠವೆಂದರೂ 6 ತಿಂಗಳು ಬೇಸಿಗೆ ಕಾಲದ ವಾತಾರವಣವನ್ನೇ ಹೊಂದಿರುವ ರಾಯಚೂರು ಜನ ಈ ಬಾರಿಯ ಬಿರು ಬಿಸಿಲಿಗೆ ತತ್ತರಿಸಿದ್ದಾರೆ. ಗಿಡ ಮರಗಳು ವಿರಳವಾಗಿರುವುದು ಸಹ ಇಲ್ಲಿನ ತಾಪಮಾನದ ಏರಿಕೆಗೆ ಕಾರಣವಾಗಿದೆ. ಅಂತೂ-ಇಂತೂ ಯಾವಾಗ ಬೇಸಿಗೆ ಮುಗಿಯುತ್ತೋ ಅಂತ ಜನ ಕಾಯುತ್ತಿದ್ದಾರೆ.