– ದೀದಿ ನಿಂದಕರ ಬೆರಳು ಕತ್ತರಿಸಿ ಎಂದು ನಾಲಿಗೆ ಹರಿಬಿಟ್ಟ ಟಿಎಂಸಿ ಸಚಿವ
ಕೋಲ್ಕತ್ತಾ: ದೇಶದಲ್ಲಿ ಭಾರೀ ಸಂಚಲನಕ್ಕೆ ಕಾರಣವಾದ ಬಂಗಾಳದ ಯುವವೈದ್ಯೆ ಹತ್ಯಾಚಾರ ಪ್ರಕರಣ ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ತಿದೆ. ತಮ್ಮ ಪುತ್ರಿಯ ಡೈರಿಯಲ್ಲಿ ಒಂದು ಪುಟ ಕಾಣೆಯಾಗಿದೆ ಎಂದು ಮೃತರ ತಂದೆ ಆರೋಪ ಮಾಡಿದ್ದಾರೆ.
ಮೃತರ ಶರೀರದ ಮೇಲೆ 14 ಗಾಯಗಳು ಕಂಡುಬಂದಿವೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ ಅಂತಾ ಹೇಳಲಾಗಿದೆ. ಆರೋಪಿಯನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ಹೈಕೋರ್ಟ್ ಅನುಮತಿ ನೀಡಿದೆ. ಮೆಡಿಕಲ್ ಕಾಲೇಜ್ ಮಾಜಿ ಪ್ರಾಂಶುಪಾಲನನ್ನು ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿದೆ. ಇನ್ನೂ ಬಂಗಾಳ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ.. ಈ ವಿಚಾರದಲ್ಲಿ ಮಮತಾ ಸರ್ಕಾರ ವಿಫಲವಾಗಿದೆ ಎಂದು ರಾಜ್ಯಪಾಲ ಆನಂದ್ ಬೋಸ್ ಆಕ್ರೋಶ ಹೊರಹಾಕಿದ್ದಾರೆ.
ಮಮತಾ ಬ್ಯಾನರ್ಜಿ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಆದ್ರೆ, ಅಭಿಷೇಕ್ ಬ್ಯಾನರ್ಜಿ ಸದ್ದು ಇಲ್ಲದೇ ಇರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹೊತ್ತಲ್ಲೇ ದೀದಿ ನಿಂದಕರ ಬೆರಳು ಕತ್ತರಿಸಿ ಎಂದು ಟಿಎಂಸಿ ಸಚಿವ ಉದ್ಯಾನ್ ಗುಹಾ ಪ್ರಚೋದನೆ ನೀಡಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾ ಮೂಲಕ ಸಿಎಂಗೆ ಬೆದರಿಕೆ ಹಾಕಿದ್ದ ಬಿಕಾಂ ವಿದ್ಯಾರ್ಥಿಯೊಬ್ಬನನ್ನು ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ಪೊಲೀಸ್ ಆಯುಕ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದ ಸುವೆಂದು ಶೇಖರ್‌ಗೆ ಸಮನ್ಸ್ ಜಾರಿಯಾಗಿದೆ.
ಹೀಗಾಗಿ ಬಂಧನದಿಂದ ರಕ್ಷಣೆ ಕೋರಿ ಸುವೆಂದು ಶೇಖರ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅಂದ ಹಾಗೆ, ಕೋಲ್ಕತ್ತಾ ಪ್ರಕರಣವನ್ನು ಸುಮೋಟೋ ಆಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಮಂಗಳವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.25 ಭದ್ರತೆ ಹೆಚ್ಚಳ:
ಟ್ರೈನಿ ವೈದ್ಯೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆ ಭುಗಿಲೆದ್ದಿರುವ ಹೊತ್ತಿನಲ್ಲೇ ಕೇಂದ್ರ ಸಚಿವಾಲಯವು ಎಲ್ಲಾ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಶೇ.25 ರಷ್ಟು ಹೆಚ್ಷಿಸಲು ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟ್ಯಾಂಡರ್ಡ್ ಸೆಕ್ಯುರಿಟಿ ಪ್ರೋಟೋಕಾಲ್ ಹೊರತಾಗಿ, ಸರ್ಕಾರಿ ಆಸ್ಪತ್ರೆಗಳು ತಮ್ಮ ಭದ್ರತಾ ಮೌಲ್ಯಮಾಪನವನ್ನು ನಡೆಸಿದ ನಂತರ ವೈಯಕ್ತಿಕ ಬೇಡಿಕೆಗಳ ಆಧಾರದ ಮೇಲೆ ಮಾರ್ಷಲ್‌ಗಳ ನಿಯೋಜನೆಗೆ ಅನುಮೋದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ರಾಷ್ಟ್ರವ್ಯಾಪಿ ಪ್ರತಿಭಟನೆ ಬೆನ್ನಲ್ಲೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ ಮಂಗಳವಾರ (ಆ.20) ಪ್ರಕರಣದ ವಿಚಾರಣೆ ನಡೆಸಲಿದೆ.