– ಸಿಬ್ಬಂದಿಗೆ ಸಂಬಳ ಹೆಚ್ಚಳದ ಭರವಸೆ
– ಸಚಿವರ ಕೆಲಸಕ್ಕೆ ಶ್ಲಾಘನೆ
ಚಾಮರಾಜನಗರ: ಮಂಗಳವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆಯಲ್ಲೇ ಸ್ನಾನ ಮುಗಿಸಿ, ಶಿವಪೂಜೆ ನೆರವೇರಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಇರುವ ಸಮಸ್ಯೆ, ಕುಂದುಕೊರತೆಗಳನ್ನು ಅರಿಯಲು ಸ್ವತಃ ಆರೋಗ್ಯ ಸಚಿವರೇ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ರೋಗಿಗಳ ಸಮಸ್ಯೆಗಳನ್ನು ಹತ್ತಿರದಿಂದ ತಿಳಿಯಲು ಶ್ರೀರಾಮುಲು ಆಸ್ಪತ್ರೆಯಲ್ಲಿ ತಂಗಿದ್ದಾರೆ. ಬೆಳಗ್ಗೆ ಎದ್ದು ಆಸ್ಪತ್ರೆಯ ಶೌಚಾಲಯದಲ್ಲೇ ಸ್ನಾನ ಮುಗಿಸಿ, ತಾವು ಉಳಿದಿದ್ದ ಕೊಠಡಿಯಲ್ಲೇ ಸಚಿವರು ಶಿವಪೂಜೆ ಮಾಡಿದರು.
Advertisement
Advertisement
ಪೂಜೆಯ ಬಳಿಕ ಆಸ್ಪತ್ರೆ ಆವರಣದಲ್ಲಿ ಶ್ರೀರಾಮುಲು ಅವರು ಸಿಬ್ಬಂದಿ ಜೊತೆ ಕುಂದುಕೊರತೆ ಸಭೆ ನಡೆಸಿದ್ದು, ಶುಶ್ರೂಷಕರ ಡಿ ದರ್ಜೆ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜೊತೆಗೆ ಸೇವಾಭದ್ರತೆ, ಸಂಬಳದ ಕೊರತೆ ಬಗ್ಗೆ ಸಚಿವರಲ್ಲಿ ಶುಶ್ರೂಷಕಿಯರು ಮನವಿ ಮಾಡಿದರು.
Advertisement
ಆಸ್ಪತ್ರೆಯ ಸಮಸ್ಯೆ, ಸಿಬ್ಬಂದಿ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕೇಂದ್ರ ಸರ್ಕಾರದ ನೂತನ ಯೋಜನೆ ಬಗ್ಗೆ ತಿಳಿಸಿ ಸಂಬಳ ಹೆಚ್ಚಿಸುವ ಬಗ್ಗೆ ಭರವಸೆ ನೀಡಿದರು. ಶ್ರೀರಾಮುಲು ಅವರ ಈ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸ್ವತಃ ಸಚಿವರೇ ಹೀಗೆ ಸಮಸ್ಯೆಗಳನ್ನು ಕಣ್ಣಾರೆ ಕಂಡು ಪರಿಹಾರ ನೀಡುವುದು ಒಂದೊಳ್ಳೆ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.