Districts
ಸನ್ನೆ ಮೂಲಕ ಮಾತನಾಡುತ್ತಿದ್ದಾರೆ ನಡೆದಾಡುವ ದೇವರು

ತುಮಕೂರು: ನಡೆದಾಡುವ ದೇವರು ಎಂದೇ ಹೆಸರುವಾಸಿಯಾಗಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯದ ಕುರಿತು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಅವರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಂಡುಬರುತ್ತಿಲ್ಲ. ಮತ್ತೆ ಅವರ ಶ್ವಾಸಕೋಶದ ಎರಡೂ ಭಾಗದಲ್ಲಿ ನೀರು ತುಂಬಿಕೊಂಡಿದೆ. ಈಗಾಗಲೇ ದೇಹದಿಂದ ನೀರನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಮಲಗಿದಲ್ಲಿಯೇ ಶ್ರೀಗಳು ಅವರ ಕೈಕಾಲುಗಳ ಚಲನವಲನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು ಆಗಿರುವುದರಿಂದ ಅವರಿಗೆ ದ್ರವರೂಪದ ಆಹಾರವನ್ನು ನೀಡಲಾಗುತ್ತಿದೆ. ಅವರಿಗೆ ಎಂದಿನಂತೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ಶ್ರೀಗಳಿಗೆ ಅಳವಡಿಸಿರುವ ಕೃತಕ ಉಸಿರಾಟದ ಸಾಧನ ತೆರವುಗೊಳಿಸಿ ಸಹಜ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಗಂಟೆಗಳ ಕಾಲ ಸಹಜ ಉಸಿರಾಟದ ನಂತರ ಮತ್ತೆ ತೊಂದರೆಯಾದಾಗ ಕೃತಕ ಉಸಿರಾಟ ಸಾಧನ ಅಳವಡಿಸುತ್ತಿದ್ದೇವೆ. ನಿನ್ನೆ ಶ್ರೀಗಳ ದೇಹದಲ್ಲಿ ಪ್ರೋಟೀನ್ ಅಂಶವು 3.1 ಇತ್ತು. ಆದ್ರೆ ಇಂದು ಪ್ರೋಟೀನ್ ಅಂಶ 2.6 ಮಿಲಿಗ್ರಾಮ್‍ಗೆ ಇಳಿಕೆಯಾಗಿದೆ ಎಂದು ಶ್ರೀಗಳ ಆರೋಗ್ಯದ ಕುರಿತು ಡಾ. ಪರಮೇಶ್ ಮಾಹಿತಿ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
