ಬೆಂಗಳೂರು: ಇಂಟರ್ ಸೆಪ್ಟರ್ ವಾಹನದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಹೆಡ್ ಕಾನ್ಸ್‌ಟೇಬಲ್ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದಿದೆ.
ಧನಂಜಯ್ಯ ಮೃತಪಟ್ಟಿರುವ ದುರ್ದೈವಿ. ಧನಂಜಯ್ಯ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಚಿಕ್ಕಜಾಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಇಂಟರ್ ಸೆಪ್ಟರ್ ವಾಹನದಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಅತಿವೇಗವಾಗಿ ಬರುತ್ತಿದ್ದ ಕಾರನ್ನ ತಡೆಯಲು ಮುಂದಾಗಿದ್ದಾರೆ. ಆಗ ಕಾರು ಚಾಲಕ ಪೊಲೀಸರು ತಡೆಯುತ್ತಿದ್ದಂತೆ ಸಡನ್ ಆಗಿ ಇಂಟರ್ ಸೆಪ್ಟರ್ ವಾಹನದ ಕಡೆ ಚಲಾಯಿಸಿದ್ದಾನೆ. ಈ ಸಂದರ್ಭದಲ್ಲಿ ಹಿಂಬಂದಿಯಿಂದ ಅತಿವೇಗವಾಗಿ ಬರುತ್ತಿದ್ದ ಮತ್ತೊಂದು ಕಾರು ರಭಸವಾಗಿ ಬಂದು ಗುದ್ದಿದೆ.
ಅತಿವೇಗದಲ್ಲಿ ಬರುತ್ತಿದ್ದಕ್ಕೆ ಫೈನ್ ಹಾಕಲು ಮುಂದಾಗಿದ್ದ ಹೆಡ್ ಕಾನ್ಸ್‌ಟೇಬಲ್ ಹಾಗೂ ಪೇದೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೆಡ್ ಕಾನ್ಸ್‌ಟೇಬಲ್ ಧನಂಜಯ್ಯ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಪೇದೆ ಉಮಾಶಂಕರ್‌ಗೆ ಗಂಭೀರವಾಗಿ ಗಾಯಗಳಾಗಿವೆ. ಉಮಾಶಂಕರ್ ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹೆಬ್ಬಾಳದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ.
ಧನಂಜಯ್ಯ ಅಪಘಾತ ಮಾಡಿದ ಕಾರನ್ನು ತಡೆಯಲು ಹೋಗಿರಲಿಲ್ಲ. ಬದಲಾಗಿ ಮತ್ತೊಂದು ಕಾರನ್ನು ತಡೆದು ಅದಕ್ಕೆ ದಂಡ ಹಾಕಲು ಮುಂದಾಗಿದ್ದರು. ಅಪಘಾತ ಮಾಡಿದ ಕಾರು ಮತ್ತೊಂದು ಕಾರನ್ನು ಓವರ್ ಟೆಕ್ ಮಾಡಲು ಹೋಗಿ ಈ ಅಪಘಾತ ಸಂಭವಿಸಿದೆ. ಇಡೀ ಘಟನಾವಳಿಯ ದೃಶ್ಯಾವಳಿಗಳು ಮತ್ತೊಂದು ಕಾರಿನ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಈ ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.