ನವದೆಹಲಿ: ರಾಖಿ ಕಟ್ಟಿಸಿಕೊಳ್ಳಲು ಸಹೋದರಿ ಮನೆಗೆ ತೆರಳುತ್ತಿದ್ದ ಬೈಕ್ ಸವಾರನ ಗಂಟಲನ್ನು ಗಾಜಿನ ಲೇಪಿತ ಗಾಳಿಪಟದ ದಾರ ಸೀಳಿದ್ದು, ವ್ಯಕ್ತಿ ಸಾವನ್ನಪ್ಪಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಇದೇ ರೀತಿ ಈ ಹಿಂದೆ ಹಲವಾರು ಅಪಘಾತಗಳಿಗೆ ಕಾರಣವಾಗಿದ್ದ ಚೈನೀಸ್ ಮಾಂಜಾ ಎಂದು ಕರೆಯಲಾಗುವ ಗಾಜಿನ ಲೇಪಿತ ಗಾಳಿಪಟದ ದಾರವನ್ನು ದೆಹಲಿಯಲ್ಲಿ 2016 ರಿಂದ ನಿಷೇಧಿಸಲಾಗಿತ್ತು. ಆದರೆ ಇದೀಗ ಎಲ್ಲೆಡೆ ವ್ಯಾಪಕವಾಗಿ ಈ ದಾರವನ್ನು ಬಳಸಲಾಗುತ್ತಿದ್ದು, ಈ ತಿಂಗಳಿನಲ್ಲಿ ದೆಹಲಿಯಲ್ಲಿ ಈ ರೀತಿಯ ಘಟನೆ ಎರಡನೇ ಬಾರಿಗೆ ಸಂಭವಿಸಿದೆ. ಇದನ್ನೂ ಓದಿ: ಅರೆಸ್ಟ್ ಮಾಡೋ ಭಯ – ಅಗ್ನಿಪಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆ
ಮೃತ ವ್ಯಕ್ತಿಯನ್ನು ವಿಪಿನ್ ಕುಮಾರ್ ಲೋನಿ ಎಂದು ಗುರುತಿಸಲಾಗಿದ್ದು, ರಕ್ಷಾ ಬಂಧನ ಹಬ್ಬವನ್ನು ಆಚರಿಸಲು ತಮ್ಮ ಸಹೋದರಿ ಮನೆಗೆ ನಾಗ್ಲೋಯ್‍ನ ರಾಜಧಾನಿ ಪಾರ್ಕ್‍ನಿಂದ ತೆರಳುತ್ತಿದ್ದರು. ಪಾರ್ಕ್ ಮೇಲ್ಸೇತುವೆ ಬಳಿ ಪತ್ನಿಯನ್ನು ಹಿಂದೆ ಕೂರಿಸಿಕೊಂಡು ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಹರಿತವಾದ ದಾರ ಕುತ್ತಿಗೆಗೆ ತಗುಲಿ ಕ್ಷಣಾರ್ಧದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಹಿಳೆಯರ ನಡುವಿನ ಅಂದವನ್ನು ಹೆಚ್ಚಿಸುವ ವೆರೈಟಿ ಸೊಂಟದ ಚೈನ್‍ಗಳು
ನಂತರ ಸ್ಥಳೀಯರ ಸಹಾಯದಿಂದ ವಿಪಿನ್ ಕುಮಾರ್ ಲೋನಿ ಪತ್ನಿ ಅವರನ್ನು ಸಿವಿಲ್ ಲೈನ್ಸ್‌ನಲ್ಲಿರುವ ಟ್ರಾಮಾ ಸೆಂಟರ್‌ಗೆ ಕರೆದೊಯ್ದರು. ಆದರೆ ವ್ಯಕ್ತಿ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.