ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ. ಇನ್ನೊಂದೆಡೆ ಕಥಾನಾಯಕಿ ಅಪ್ಪನ ಗುರಿಯನ್ನು ತನ್ನ ಗುರಿಯನ್ನಾಗಿಸಿಕೊಂಡು ಐ.ಪಿ.ಎಸ್ ಆಗುವ ಕನಸ್ಸನ್ನು ಹೊತ್ತವಳು. ತನ್ನ ಮುಗುಳು ನಗೆಯಿಂದಲೇ ಎಲ್ಲಾ ಸಮಸ್ಯೆ ಬಗೆಹರಿಸುವ ಚತುರೆ ಇವಳು. ಈ ಚಲುವೆಗೂ ಆ ಕಪ್ಪು ಚಲುವನಿಗೂ ಇರುವ ಋಣಾನುಬಂಧದ ಕಥೆಯನ್ನು ಹೇಳಲು ಉದಯ ಟಿವಿ ಸಜ್ಜಾಗಿದೆ.
Advertisement
ಕಪ್ಪು ಮೈಬಣ್ಣ ಹಾಗು ದಪ್ಪ ದೇಹ ಹೊಂದಿರುವ ಕಥಾ ನಾಯಕ ಹೆಸರಿಗೆ ಮಾತ್ರ ಚೆಲುವರಾಜ್. ಇವನು ರೆಬಲ್ ಸ್ಟಾರ್ ಅಂಬರೀಷ್ ಅವರ ಅಪ್ಪಟ ಅಭಿಮಾನಿ. ಮುಗ್ಧತೆ 100%, ವಿದ್ಯೆ 0%. ಆದರೆ ಇವನು ನೀಡುವ ನಗುವಿನ ಕಚಗುಳಿ 200%. ಹೀಗಿರುವ ಚೆಲುವರಾಜ ಅನುಭವಿಸಿರುವ ಅವಮಾನಕ್ಕೆ ಲೆಕ್ಕವಿಲ್ಲ. ಒಂದಲ್ಲ ಒಂದು ದಿನ ಅಂಬರೀಷ್ ಅವರ ರೀತಿ ತಾನೂ ಹೀರೊ ಆಗಬಲ್ಲೆ ಎಂದು ಕನಸು ಕಂಡಿರುವಾತ. ಚೆಲುವನ ತಾಯಿ ವಸುಂಧರ. ಇವಳಿಗೆ ತನ್ನ ಮಗನ ಮೇಲೆ ತುಂಬಾ ಪ್ರೀತಿ. ಮಗನಿಗೆ ವಿದ್ಯೆ ಕಲಿಸಲು ಹರಸಾಹಸ ವಿಫಲವಾಗಿದ್ದರೂ ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಲು ಪಣತೊಟ್ಟಿರುವ ಹೆಂಗರುಳು.
Advertisement
ಇನ್ನು ಕಥಾ ನಾಯಕಿ ದುರ್ಗಾ, ಪರಮೇಶ್ವರಿಯಷ್ಟೇ ಸುಂದರಿ ಮತ್ತು ಧೈರ್ಯವಂತೆ. ಅಪ್ಪ-ಅಮ್ಮನ ಮುದ್ದಿನ ಮಗಳು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಂಬಿಕೆ ದುರ್ಗಾಳದ್ದು. ತನ್ನ ತಂಗಿ ಭಾವನಾಳ ಭಾವನೆಗಳಿಗೆ ಮಾತು ಇವಳದ್ದೆ. ಅಪ್ಪನ ಕನಸಿನಂತೆ ಐ.ಪಿ.ಎಸ್ ಆಗೋದೆ ಇವಳ ಗುರಿ. ದುರ್ಗಾ ಮತ್ತು ಚೆಲುವನ ನಡುವೆ ಅರಳುವ ವಿಭಿನ್ನವಾದ ಪ್ರೇಮರಾಗವೇ ಆನಂದರಾಗ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ
Advertisement
Advertisement
ವಿನೂತನ ಪ್ರೇಮರಾಗದಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್ (Deepa Hiremath) ಹಾಗು ಚೆಲುವರಾಜ ಆಗಿ ರಂಗಭೂಮಿ ಮಂಜು (Manju) ಆನಂದರಾಗದ (Anandaraga) ಘಮ ಬೀರಲಿದ್ದಾರೆ. ಕಥಾ ನಾಯಕಿಯ ತಂದೆಯಾಗಿ ಖ್ಯಾತ ಖಳನಾಯಕ ಕೀರ್ತಿರಾಜ್ (Keerthiraj) ಪಾತ್ರ ವಹಿಸಿದರೆ, ತಾಯಿಯಾಗಿ ಪ್ರತಿಭಾನ್ವಿತ ನಟಿ ಉಷಾ ಭಂಡಾರಿ (Usha Bhandari) ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ ಹೆಸರಾಂತ ನಟಿ ವೀಣಾ ಸುಂದರ್ (Veena Sundar) ನಟಿಸುತ್ತಿದ್ದಾರೆ ಹಾಗೂ ಮತ್ತಷ್ಟು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ.
ಆನಂದರಾಗದ ನಿರ್ಮಾಣದ ಹೊಣೆಯನ್ನು ವಿಷನ್ ಟೈಮ್ಸ್ ನಿಭಾಯಿಸುತ್ತಿದೆ. ಎಸ್.ಗೋವಿಂದ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈಗಾಗಲೇ ಹಲವಾರು ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡಿರುವ ಉದಯ ಟಿವಿ ಆನಂದರಾಗ ಧಾರಾವಾಹಿಯ ಮೂಲಕ ಆ ಪಯಣವನ್ನು ಮುಂದುವರೆಸಿದೆ. ಆನಂದರಾಗ ಧಾರಾವಾಹಿಯು ಮಾರ್ಚ್ 13 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿದೆ.