ಬೆಂಗಳೂರು: ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಹರಡುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು. ಈ ವಿಷಯದಲ್ಲಿ ಸರ್ಕಾರ ಸುಮ್ಮನಿರಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ವಿಧಾನಸೌಧದ ಬಳಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಹೆಚ್‌ಡಿಕೆ ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲವನ್ನೂ ನೋಡಿಕೊಂಡು ಕೆಲ ಸಂಘಟನೆಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
Advertisement
ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಒಂದು ಸಮುದಾಯಕ್ಕೆ ಮೀಸಲಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸೇರಿದವರು. ಎಲ್ಲರ ರಕ್ಷಣೆ ಸರ್ಕಾರದ ಹೊಣೆ. ಒಂದು ಸಮುದಾಯವನ್ನು ರಕ್ಷಣೆ ಮಾಡಿಕೊಂಡು ಸರ್ಕಾರ ನಡೆಸಲು ಆಗದು. ಇಂತದ್ದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರನ್ನು ಕಿತ್ತು ಒಗೆಯುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ
Advertisement
Advertisement
ನಾನು ವಾಟ್ಸಪ್‌ನಲ್ಲಿ ಬಂದ ಇಂತಹ ಸಂದೇಶಗಳನ್ನು ಗಮನಿಸಿದ್ದೇನೆ. ಇಂತಹ ಕಿಡಿಗೇಡಿ ಸಂದೇಶಗಳನ್ನು ಯಾರು ಹರಡುತ್ತಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟ ಹಾಕಬೇಕು. ಒಂದು ವೇಳೆ ಶಾಸಕರು, ಸಚಿವರೇ ಇದ್ದರೂ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಜನರೇ ಬಹಿಷ್ಕಾರ ಹಾಕಬೇಕು ಆಗ್ರಹಿಸಿದರು.
Advertisement
ಮುಸ್ಲಿಂ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಸುಮಾರು 23 ವಿಷಯಗಳ ಬಗ್ಗೆ ಪ್ರೋತ್ಸಾಹ ಕೊಡಬೇಡಿ ಎಂದು ಬರೆಯಲಾಗಿದೆ. ಹಣ್ಣಿನ ವ್ಯಾಪಾರ, ಹೋಟೆಲ್, ಹಾರ್ಡ್ ವೇರ್, ಟ್ರಾವೆಲ್, ಕಿರಾಣಿ ಅಂಗಡಿ, ಟ್ರಾವೆಲ್ ಬುಕಿಂಗ್, ಮುಸ್ಲಿಂ ವೈದ್ಯರ ಬಳಿ ಹೋಗಬೇಡಿ ಎಂದು ಸಂದೇಶ ಸಾರುತ್ತಿದ್ದಾರೆ. ಇದು ಜನರ ತಲೆ ಕೆಡಿಸುವ ಕೆಲಸವಾಗುತ್ತಿದೆ. ಹಿಂದೂಗಳ ಅಂಗಡಿಗಳಿಗೆ ಮಾತ್ರ ಹೋಗಿ ಎಂದು ಸಂದೇಶ ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ಇವರು ನಮ್ಮ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವ ಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ. ಇಂತವರನ್ನು ಸುಮ್ಮನೆ ಬಿಡಬಾರದು. ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದರೆ ಅರ್ಥವೇನು? ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲು ಜೆಡಿಎಸ್ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ನೇರ ಕಾರಣ. ಅವರಿಂದಲೇ ಇಂತಹ ಸರ್ಕಾರ ಬಂದಿರುವುದು. ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ನಮಗೆ ಕಾಂಗ್ರೆಸ್‌ನವರು ಜೆಡಿಎಸ್‌ಗೆ ಕೊಟ್ಟ ಕಿರುಕುಳ ಇಂತಹ ಪರಿಸ್ಥಿತಿಗೆ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯವರೆ ಕಾರಣ ಎಂದು ನೇರ ವಾಗ್ದಾಳಿ ನಡೆಸಿದರು.
ಈ ಕಾರಣಕ್ಕೆ ನಾನು ಹಿಂದು ಸಮುದಾಯದ ಕೆಲ ಯುವಕರಿಗೆ ಕೈ ಮುಗಿದು ಹೇಳುತ್ತೇನೆ, ರಾಜ್ಯ ಹಾಳು ಮಾಡಿಕೊಳ್ಳಬೇಡಿ. ರಾಜಕೀಯಕ್ಕಾಗಿ ಮನಸುಗಳನ್ನು ಕೆಡಿಸುವ ಕಿಡಿಗೇಡಿಗಳ ಮಾತು ಕೇಳಬೇಡಿ. ಯಾರು ಕೂಡ ಇಲ್ಲಿ ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ. ಇದನ್ನು ಹಾಳು ಮಾಡಬೇಡಿ ಎಂದು ಹೆಚ್‌ಡಿಕೆ ಮನವಿ ಮಾಡಿದರು. ಇದನ್ನೂ ಓದಿ: ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ- ಪೊಲೀಸರ ಜೊತೆ ಪ್ರತಿಭಟನಾಕಾರರ ವಾಗ್ವಾದ
ಈದ್ಗಾ ಮೈದಾನ ಉದಾಹರಣೆ:
ಈದ್ಗಾ ಮೈದಾನದ ಹೆಸರಲ್ಲಿ ಹಲವಾರು ಅಮಾಯಕ ಮಕ್ಕಳನ್ನು ಬಲಿ ತಗೊಂಡರು. ದೇವೇಗೌಡರು ಸಿಎಂ ಆಗುವ ತನಕ ಪ್ರತಿವರ್ಷ ಒಬ್ಬರು, ಇಬ್ಬರನ್ನಾದರೂ ಬಲಿ ಆಗುತ್ತಿದ್ದರು. ಅಂತಹ ಸಂದರ್ಭದಲ್ಲಿ ಈದ್ಗಾ ವಿವಾದವನ್ನು ದೇವೇಗೌಡರು ಬಗೆಹರಿಸಿದರು. ಇವತ್ತು ಏನಾಗಿದೆ? ಬಿಜೆಪಿಯವರು ಹೀಗೆಲ್ಲಾ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ. ಇದು ಅನೈತಿಕ ಸರ್ಕಾರ ಎಂದು ಟೀಕೆ ಮಾಡುವ ಇವರು, ಈ ಸರ್ಕಾರ ಬರಲು ಮೂಲ ಕಾರಣರು ಎಂದು ಕಾಂಗ್ರೆಸ್ ಮೇಲೆ ಮಾಜಿ ಮುಖ್ಯಮಂತ್ರಿ ಟೀಕಾಪ್ರಹಾರ ನಡೆಸಿದರು.
ಅರೆಸ್ಟ್ ಮಾಡ್ತಾರೆ:
ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಬಿಜೆಪಿಯವರು. ಈ ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ? ಏನು ಮಾಡುತ್ತಿದೆ ಸರ್ಕಾರ? ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಇಂಥ ವಿಚಾರಗಳ ಬಗ್ಗೆ ಪ್ರಚೋದನೆ ಮಾಡುವವರನ್ನು ಕೂಡ ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಕೂಡ ಅರೆಸ್ಟ್ ಮಾಡಿ ಎಂದು ಆಗ್ರಹಿಸಿದರು.
ಸಮಾಜವನ್ನು ಒಡೆಯುವ ಇವರು ದೇಶ ಉಳಿಸುವವರಲ್ಲ. ದೇಶ ಉಳಿಸುವವರು ಜನರು, ಮುಗ್ಧ ಪ್ರಜೆಗಳು. ನಾನು ಯುವಕರಿಗೆ ಹೇಳುತ್ತೇನೆ, ಯುವಕರು ಇದಕ್ಕೆ ಬಲಿಯಾಗಬಾರದು. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ. ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.
ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಿಗೆ ಹೋಗುತ್ತಾರೆ. ಕಿಡಿಗೇಡಿಗಳು ಕೂಡ ಮಣ್ಣಿಗೆ ಹೋಗುತ್ತಾರೆ. ಕರ್ನಾಟಕ ರಾಜ್ಯ ಶಾಂತಿಯ ತೋಟ, ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಕರ್ನಾಟಕದ ಜನರು ಬಹಿಷ್ಕಾರ ಮಾಡಬೇಕು. ಸಮಾಜದಿಂದ ಹೊರ ಹಾಕಬೇಕು. ಇಲ್ಲದಿದ್ದರೆ ಮುಂದೆ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿದ್ದರೆ ಸದನದಲ್ಲಿ ಸಭಾಧ್ಯಕ್ಷರು ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಚರ್ಚೆ? ನನಗೆ ಈ ಕಲಾಪದಲ್ಲಿ ಭಾಗಿಯಾಗುವ ಉದ್ದೇಶ ಇರಲಿಲ್ಲ. ಆದರೆ ಇಂತಹ ಸಮಾಜಘಾತುಕ ಸಂದೇಶಗಳ ಬಗ್ಗೆ, ಇವುಗಳ ಹಿಂದೆ ಇರುವವರನ್ನು ಹೊರಗೆ ಎಳೆಯಬೇಕು ಎನ್ನುವ ಬಗ್ಗೆ ಮಾತನಾಡಲು ಕಲಾಪಕ್ಕೆ ಬಂದೆ. ಸದನದಲ್ಲಿ ಇಂತಹ ವಿಚಾರ ಚರ್ಚೆ ಆಗಬೇಕು ಎಂದು ಕುಮಾರಸ್ವಾಮಿ ಪ್ರತಿಪಾದಿಸಿದರು.
ಉತ್ತರ ಭಾರತದಲ್ಲಿ ಮತಕ್ಕಾಗಿ ಮಾಡಿದ್ದನ್ನೇ ಇಲ್ಲಿಯೂ ಮಾಡಲು ಹೊರಟಿದ್ದಾರೆ. ಉತ್ತರವೇ ಬೇರೆ, ದಕ್ಷಿಣವೇ ಬೇರೆ. ಉತ್ತರದಲ್ಲಿ ಮೊಘಲರ ಆಡಳಿತ ಇತ್ತು, ಅನೇಕ ದಾಳಿಗಳು ನಡೆದವು. ಆದರೆ ಇಲ್ಲಿನ ಪರಿಸ್ಥಿತಿ ಬೇರೆ. ನಮ್ಮ ರಾಜ್ಯ ನೆಮ್ಮದಿಯ ನಾಡು. ಆದರೂ ಅಶಾಂತಿಯನ್ನು ಹುಟ್ಟು ಹಾಕುವ ಕೃತ್ಯ ನಡೆಯುತ್ತಿದೆ. ಇದು ಖಂಡಿತಾ ಸರಿಯಲ್ಲ ಎಂದು ಒತ್ತಿ ಹೇಳಿದರು.
ಸಮಾಜವನ್ನು ಒಡೆಯುವ ಸಂದೇಶ ಮುಖ್ಯವಲ್ಲ. ಹೊಟ್ಟೆಗೆ ತಿನ್ನಲು ಏನು ಕೊಟ್ಟಿದ್ದಾರೆ, ಹೊಟ್ಟೆಗೆ ತಣ್ಣೀರು ಬಟ್ಟೆ ಅಷ್ಟೇ. ಈ ಸಮಾಜವನ್ನು ವಿಘಟನೆ ಮಾಡುತ್ತಿರುವವರು ಹಿಂದೂ ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವವರು ಓಬಿಸಿ, ದಲಿತರು. ದೇವಸ್ಥಾನದ ಒಳಗೆ ಕುಳಿತುಕೊಂಡು ಆಸ್ತಿ ಹೊಡೆಯುವವರು ಇಂತಹ ವಿದ್ರೋಹದ ಕೆಲಸ ಮಾಡುವವರು ಎಂದ ಅವರು, ನಾನೆಂದೂ ಇಷ್ಟು ಕಠಿಣವಾಗಿ ಮಾತಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.