ಬೆಂಗಳೂರು: ಜೆಡಿಎಸ್ (JDS) ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸರ್ಟಿಫಿಕೇಟ್ ಕೊಡೋದು ಬೇಡ. ಜೆಡಿಎಸ್ ಉಳಿಯುತ್ತೋ? ನಾಶ ಆಗುತ್ತೋ ಅಂತ ನಾಡಿನ ಜನ ಸರ್ಟಿಫಿಕೇಟ್ ಕೊಡ್ತಾರೆ ಅಂತ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಕ್ಷ ನಿರ್ಣಾಮ ಆಗ್ತಿದೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಸರ್ಟಿಫಿಕೇಟ್ ಬೇಕಿಲ್ಲ. ಲೀಸ್ ಬೇಸ್ ಸಿಎಂ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಅವರಪ್ಪನನ್ನ ಕೇಳೋಕೆ ಹೇಳಿ. ಕಾಂಗ್ರೆಸ್ (Congress) ಪಕ್ಷದಲ್ಲಿ ಇರೋ ಮಂತ್ರಿಗಳು ಎಷ್ಟು ಜನರನ್ನು ಜೆಡಿಎಸ್‌ನಿಂದ ಲೀಸ್ ಮೇಲೆ ಪಡೆದ್ರಿ. ಸಿಎಂರಿಂದ ಹಿಡಿದು ಎಷ್ಟು ಜನ ಮಂತ್ರಿಗಳನ್ನ ಲೀಸ್ ಬೇಸ್ ಮೇಲೆ ನಿಮ್ಮ ಪಾರ್ಟಿಗೆ ತಗೊಂಡಿದ್ದೀರಾ. ಎಷ್ಟು ಜನ ಮಂತ್ರಿ ಮಾಡಿಕೊಂಡಿದ್ದೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕನ ಮನೆಗೆ ಬೆಂಕಿ
ನಿಮ್ಮ ಪಕ್ಷದಲ್ಲಿ ಒಂದು ಕಡೆ ಒಬ್ಬರ ಲೀಸ್ ಅವಧಿ ಮುಗಿದು ಹೋಗಿದೆ ನನ್ನನ್ನ ಸಿಎಂ ಮಾಡಿ ಅಂತಾರೆ. ಇನ್ನೊಬ್ಬರು ಲೀಸ್ ಅವಧಿ ಮುಗಿದಿಲ್ಲ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಅಂತಾರೆ. ಮೊದಲು ನಿಮ್ಮ ಪಾರ್ಟಿ ಹಣೆಬರಹ ನೋಡಿಕೊಳ್ಳಿ. ಮಹಾರಾಷ್ಟ್ರದಲ್ಲಿ ಇವತ್ತು ಏನಾಗಿದೆ. ಪ್ರಿಯಾಂಕ್ ಖರ್ಗೆ ಅವರೇ, ಕರ್ನಾಟಕ ಚುನಾವಣೆ ಹಣೆಬರಹವು ಮುಂದೆ ಇದೇ ಆಗೋದು. ಬಿಹಾರದಲ್ಲಿ 6 ಸೀಟು ತಗೊಂಡ್ರಿ. ಈ ದುರಹಂಕಾರ ಬಿಡದೇ ಇದ್ದರೆ ನಿಮಗೂ ಹೀಗೆ ಆಗೋದು ಎಂದು ಭವಿಷ್ಯ ನುಡಿದಿದ್ದಾರೆ.
ಏನ್ ಅಭಿವೃದ್ಧಿ ಮಾಡಿದ್ದೀರಾ ಅಂತ ಜನ ನಿಮಗೆ ಅಧಿಕಾರ ಕೊಡ್ತಾರೆ. ಅವರ ತಂದೆ ಹಿರಿಯ ಖರ್ಗೆ ಮೊನ್ನೆ ಸಮಾವೇಶದಲ್ಲಿ ಏನ್ ಮಾತಾಡಿದ್ರು. ನಿಮ್ಮ ತಂದೆ 40 ವರ್ಷ ಮಾಡಿದ್ದು ಏನು? ಪ್ರಿಯಾಂಕ್ ಖರ್ಗೆ 9 ವರ್ಷ ಮಂತ್ರಿ ಆಗಿದ್ದರು ನೀವು ಮಾಡಿದ್ದು ಏನಪ್ಪ? ಅದಕ್ಕೆ ನಿಮಗೆ 200 ಸೀಟು ಕೊಡ್ತಾರಾ? ಮುಂದೆ ಅಧಿಕಾರ ಕೊಡ್ತಾರಾ? ನನ್ನ ಪಕ್ಷ ನಾಶ ಆಗಿದೆಯೋ? ಉಳಿದಿದೆಯೋ ಜನ ತೀರ್ಮಾನ ಮಾಡ್ತಾರೆ. ನಿಮ್ಮ ಪರಿಸ್ಥಿತಿ ಎಲ್ಲಿಗೆ ಬರ್ತೀರಾ ಅಂತ ಕೂತು ಯೋಚನೆ ಮಾಡಿ ಎಂದು ತಿಳಿಸಿದ್ದಾರೆ.
ಈ ರಾಜ್ಯದಲ್ಲಿ ನೀವು ಏನೇನು ಮಾಡ್ತಾ ಇದ್ದೀರಾ, ನಿಮ್ಮನ್ನ ಜನ ಎಲ್ಲಿಗೆ ಕರೆದುಕೊಂಡು ಹೋಗ್ತಾರೆ ಯೋಚನೆ ಮಾಡಿ. ನನ್ನ ಪಕ್ಷದ ಬಗ್ಗೆ ನೀವು ಯೋಚನೆ ಮಾಡಬೇಡಿ. ನನ್ನ ಪಕ್ಷದ ಕಾರ್ಯಕರ್ತರು ಯೋಚನೆ ಮಾಡ್ತಾರೆ. ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಗ್ಗೆ ಭಯ ಇದೆ. ಜೆಡಿಎಸ್ ಫಿನಿಶ್ ಅದ್ರೆ ಅವರು ಉಳಿಯುತ್ತಾರೆ. ಜೆಡಿಎಸ್ ಮೇಲೆ ಬಂದರೆ ಅವರ ಲೈಫ್ ಏನು ಅಂತ ಅವರಿಗೆ ಗೊತ್ತಿದೆ. ಜಸ್ಟ್ ಲೋಕಸಭೆ ಮೈತ್ರಿ ಆಗಿದ್ದಕ್ಕೆ ನಿಮ್ಮ ಹಣೆಬರಹ ಎಲ್ಲಿಗೆ ಬಂತು. ಇನ್ನು 4-5 ಸೀಟು ಬರಬೇಕಿತ್ತು. ನಮ್ಮ ದೋಷದಿಂದ 9 ಸೀಟು ಬಂತು. ಇಲ್ಲ ಅಂದರೆ 3-4. ಅಷ್ಟೆ ಬರುತ್ತಿದ್ರಿ. ಜೆಡಿಎಸ್ ಉಳಿಯುತ್ತೋ? ನಾಶ ಆಗುತ್ತೋ ಖರ್ಗೆ ಅಲ್ಲ ಸರ್ಟಿಫಿಕೇಟ್ ಕೊಡೋದು. ಈ ನಾಡಿನ ಜನತೆ ಕೊಡ್ತಾರೆ. ಅಲ್ಲಿವರೆಗೂ ಕಾದು ನೋಡಿ ಅಂತ ಸವಾಲ್ ಹಾಕಿದ್ದಾರೆ.ಇದನ್ನೂ ಓದಿ: ಗೋಕರ್ಣ ಬೀಚ್‌ನಲ್ಲಿ ಬೋಟಿಂಗ್‌ಗೆ ತೆರಳಿದ್ದ ಬೆಂಗಳೂರಿನ ಮಹಿಳೆ ಸಾವು

