ಕಲಬುರಗಿ: ಸಿಲಿಕಾನ್ ಸಿಟಿಯಲ್ಲಿರೋ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗ ನೊರೆ ಆರಂಭವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಬೆಂಗಳೂರು ಅಭಿವೃದ್ಧಿಯ ಯೋಜನೆಯಿಲ್ಲ ಅಂತ ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಹೆಸರಲ್ಲಿ ಹಣ ಲೂಟಿ ಮಾಡುವುದೇ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರುಗಳ ಕೆಲಸವಾಗಿದೆ. ವಿಶ್ವ ಮಟ್ಟದಲ್ಲಿ ಅನೇಕ ತಂತ್ರಜ್ಞಾನಗಳಿವೆ. ಆದ್ರೆ ಅದನ್ನು ಬಳಸಲು ಸರ್ಕಾರಕ್ಕೆ ಏನಾಗಿದೆ ಅಂತ ಪ್ರಶ್ನಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಬೆಳ್ಳಂದೂರು ಕೆರೆಯ ಇಬ್ಬಲೂರು ಮತ್ತು ಈಜಿಪುರ ಕಡೆಯ ದಡದಲ್ಲಿನ ಹುಲ್ಲಿಗೆ ಹತ್ತಿದ್ದ ಬೆಂಕಿಯನ್ನು ನಂದಿಸುವ ಕಾರ್ಯ ಶನಿವಾರವೂ ಮುಂದುವರಿದಿದೆ. ನಿನ್ನೆಯಿಂದಲೇ ಅಗ್ನಿಶಾಮಕದಳದ ಜೊತೆಗೆ 5 ಸಾವಿರ ಸೈನಿಕರಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ಕೆರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ತಣ್ಣಾಗಾಗಿಲ್ಲ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಹಿಂದಿನ ವಿಚಾರಣೆ ವೇಳೆ ಬೆಳ್ಳಂದೂರು ಕೆರೆಯನ್ನು ಸಂಪೂರ್ಣ ಸ್ವಚ್ಛ ಮಾಡಬೇಕು ಎಂದು ಅನೇಕ ಬಾರಿ ತಾಕೀತು ಮಾಡಿತ್ತು. ಆದರೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‍ಪಿಸಿಬಿ), ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್‍ಸಿಡಿಎ), ಬಿಡಿಎ ಹಾಗೂ ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಮತ್ತೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿಂದೆ 2015ರಲ್ಲಿ ಕೆರೆಯಲ್ಲಿ ವಿಷಪೂರಿತ ನೊರೆಯಿಂದಾಗಿ ಬೆಂಕಿ ಹೊತ್ತಿಕೊಂಡಿತು. ಇದಾದ ಬಳಿಕ 2016ರ ಫೆಬ್ರುವರಿಯಲ್ಲಿ ನೊರೆ ಸಮಸ್ಯೆಯಿಂದ ಕೆರೆಗೆ ಬೆಂಕಿ ಹತ್ತಿಕೊಂಡಿತ್ತು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ ಈ ಪ್ರಕರಣ ಎನ್‍ಜಿಟಿಯನ್ನು ತಲುಪಿತ್ತು. ಅರ್ಜಿ ವಿಚಾರಣೆ ವೇಳೆ ನ್ಯಾಯಮಂಡಳಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಪರಿಣಾಮ ಕೆರೆಯ ಹೂಳನ್ನು ತೆಗೆಯಲಾಗಿತ್ತು. ಈಗ ಕೆರೆಯ ಸುತ್ತಲೂ ಬೇಲಿ ಹಾಕಲಾಗಿದೆ.
https://www.youtube.com/watch?v=F_VbVFNu6F0
https://www.youtube.com/watch?v=syYAEeLN9wc
https://www.youtube.com/watch?v=j98T-w6QJ98