ಹಾಸನ: ಬಡವರು ಕೂಲಿ ಕೆಲಸ ಮಾಡಿ ಮಕ್ಕಳನ್ನು ಓದಿಸುತ್ತಿದ್ದಾರೆ. 470 ಕಾಲೇಜುಗಳ ಶುಲ್ಕದ ದುಡ್ಡನ್ನು ಬೆಂಗಳೂರಿಗೆ ತರಿಸಿಕೊಂಡು ಗಿರಾಕಿಗಳು ಟೆಂಡರ್ ಕರಿತಾರೆ. ಇದೆಲ್ಲಾ ಮಾಡೋದ್ರಿಂದ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತಾ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D Revanna) ಕಿಡಿಕಾರಿದ್ದಾರೆ.
ಹೊಳೆನರಸೀಪುರ (Holenarasipur) ಪಟ್ಟಣದ ಮಹಿಳಾ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಈ ವೇಳೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಶುಲ್ಕದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಎಷ್ಟು ದಿನ ನೀವು ಬಡವರ ಮಕ್ಕಳನ್ನು ಗೋಳಾಡಿಸುತ್ತೀರಿ? ಏನ್ರೀ ಆಗಿರೋದು ನಿಮಗೆ, ಕಾಲೇಜಿನ ಮಕ್ಕಳ ಶುಲ್ಕದ ದುಡ್ಡನ್ನು ಹೊಡೆಯಬೇಕಾ? ನಿಮ್ಮ ಕುಟುಂಬವೂ ನಾಶ ಆಗುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ವಿದ್ಯಾರ್ಥಿಗಳಿಗೆ (Students) ಗುಣಮಟ್ಟದ ಶಿಕ್ಷಣ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಅದರೆ, ಮಕ್ಕಳು ಕಟ್ಟುವ ಶುಲ್ಕದ ದುಡ್ಡನ್ನು ಈ ಗಿರಾಕಿಗಳು ಬಿಡುತ್ತಿಲ್ಲ. ಉನ್ನತ ಶಿಕ್ಷಣ ಸಚಿವರಿಗೆ ನಾನು ಹೇಳೋದು ಇಷ್ಟೇ, ಬಡವರ ಬಗ್ಗೆ ಕರುಣೆ ಇಡಿ ಎಂದು ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ್ದಾರೆ.