ಬೆಂಗಳೂರು: ವಿಶ್ವಾಸಮತಯಾಚನೆಯ ಸಂದರ್ಭದ ಚರ್ಚೆಯ ವೇಳೆ ಲೋಕೋಪಯೋಗಿ ಸಚಿವ ರೇವಣ್ಣನವರನ್ನು ಸ್ಪೀಕರ್ ಕಾಲೆಳೆದ ಪ್ರಸಂಗ ನಡೆಯಿತು.
ಮೈತ್ರಿ ಸರ್ಕಾರ ರಚನೆಯಾದ ಒಂದು ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ. ಹೀಗಾಗಿ ಸದನದಲ್ಲಿ ಮಾತನಾಡಲು ನನಗೆ ಕನಿಷ್ಠ 2 ಗಂಟೆ ಸಮಯದ ಅಗತ್ಯವಿದೆ. ಈ ಬಗ್ಗೆ ಸದನದ ಗಮನಕ್ಕೆ ತರಬೇಕಿದೆ ಸ್ಪೀಕರ್ ಅವರಲ್ಲಿ ಕೈ ಮುಗಿದು ಮನವಿ ಮಾಡಿದರು.
ರೇವಣ್ಣ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸ್ಪೀಕರ್ ಅವರು, ನಮ್ಮ ಜ್ಯೋತಿಷಿಗಳನ್ನು ಕೇಳಿ ಸಮಯವನ್ನು ನಿಗದಿ ಮಾಡುತ್ತೇನೆ. ಅಲ್ಲಿಯವರೆಗೂ ಶಿವಲಿಂಗೇಗೌಡರು ಮಾತನಾಡುತ್ತಾರೆ ಹಾಸ್ಯ ಚಟಾಕಿ ಸಿಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಸಿಎಂ ಅವರು ರೇವಣ್ಣ ಅವರ ಟೆಂಪಲ್ ರನ್ ಬಗ್ಗೆ ಟೀಕೆ ಮಾಡಿದ್ದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೇವಣ್ಣ ಅವರು ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿ ದೇವರ ಬಳಿ ಪ್ರಾರ್ಥನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಅರ್ಚಕರು ಏಲಕ್ಕಿ ಹಾರ ಅಥವಾ ನಿಂಬೆ ಹಣ್ಣು ನೀಡುತ್ತಾರೆ. ಇವುಗಳನ್ನು ಕೈಯಲ್ಲಿ ಹಿಡಿದು ರೇವಣ್ಣ ಅವರು ತಮ್ಮ ಮುಂದಿನ ಕೆಲಸಕ್ಕೆ ತೆರಳುತ್ತಾರೆ. ಆದರೆ ಇದನ್ನೇ ಟೀಕೆ ಮಾಡಿದ್ದಾರೆ. ನಮ್ಮದು ಮಾಟ ಮಂತ್ರ ಮಾಡುವ ಕುಟುಂಬ ಅಲ್ಲ. ಇಂದು ರಾಮನ ಸಂಸ್ಕೃತಿ ಬಗ್ಗೆ ಮಾತನಾಡುವ ನೀವು ಈ ಬಗ್ಗೆ ಟೀಕೆ ಮಾಡುತ್ತಾರೆ. ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದಾದರೆ ನಾವು ಜನರ ಬಳಿ ಹೋಗುವ ಸಂದರ್ಭವೇ ಬರುತ್ತಿರಲಿಲ್ಲ. ನಾವು ದೇವರ ಮೇಲೆ ನಂಬಿಕೆ ಇಟ್ಟಿದ್ದೇವೆ ಅಷ್ಟೇ ಎಂದರು.