ಹಾಸನ: ಮಾಜಿ ಸಚಿವ ಎ.ಮಂಜುರವರಿಗೆ ಮಾಡಲು ಏನು ಕೆಲಸ ಇಲ್ಲ ಅಂತ ಕಾಣುತ್ತೆ. ಹೀಗಾಗಿ ಏನಾದರೂ ಒಂದು ಗಾಳಿ ಸುದ್ದಿ ಬಿಡಬೇಕು ಅನ್ನುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನ ನಗರದ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಭೂಮಿ ಕಬಳಿಕೆ ಆರೋಪ ಮಾಡಿರುವ ಮಾಜಿ ಸಚಿವ ಎ.ಮಂಜು ಅವರ ಹೇಳಿಕೆಗೆ ತಿರುಗೇಟು ನೀಡಿದರು.
Advertisement
Advertisement
ಯಾವುದೇ ಸರ್ಕಾರಿ ಭೂಮಿಯನ್ನು ರೇವಣ್ಣ ಅಥವಾ ಕುಟುಂಬದ ಯಾರೇ ಮಾಡಿದ್ದರೂ ಸಹ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಈ ಹಿಂದೆ ಯಡಿಯೂರಪ್ಪನವರು ಸಹ ನಮ್ಮ ಕುಟುಂಬ ಭೂಮಿ ಕಬಳಿಸಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ. ಅಲ್ಲದೇ ಅದಕ್ಕಾಗಿ ಓರ್ವ ಮಂತ್ರಿಯನ್ನೇ ಬಿಟ್ಟಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಈಗ ಮಾಜಿ ಸಚಿವರು ಶುರು ಹಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೇವಣ್ಣ ವಿರುದ್ಧವೇ ಭೂ ಕಬಳಿಕೆ ಆರೋಪ: ಎ ಮಂಜು ದಾಖಲೆ ರಿಲೀಸ್
Advertisement
ಎ.ಮಂಜು ಅವರಿಗೆ ಸದ್ಯ ಮಾಡಲು ಏನೂ ಕೆಲಸವಿಲ್ಲ. ಈಗ ಅವರಿಗೆ ಬಿಡುವು ಜಾಸ್ತಿ ಇದೆ. ಹೀಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಮಂತ್ರಿಯಿದ್ದಾಗಲೇ ಆರೋಪ ಮಾಡಲು ಹೋಗಿದ್ದರು. ಆದರೆ ಆವಾಗ ಅವರಿಗೆ ಏನು ಸಿಕ್ಕಿರಲಿಲ್ಲ. ಈಗ ಏನಾದರೂ ಸಿಕ್ಕಿರಬೇಕು, ಏನು ಬೇಕಿದ್ದರೂ ತನಿಖೆ ಮಾಡಲಿ ನಾನೇನು ಬೇಡ ಅನ್ನುವುದಿಲ್ಲ. ಏನಾದರೂ ಗಾಳಿ ಸುದ್ದಿ ಬಿಡಬೇಕಲ್ಲ ಅಂತ ಹೀಗೆ ಹೇಳಿಕೆ ನೀಡಿರಬಹುದು ಎಂದು ಆಕ್ರೋಶ ಹೊರಹಾಕಿದರು.
Advertisement
ನಿರ್ಮಲಾನಂದ ಶ್ರೀಗಳ ಕುರಿತು ಎ.ಮಂಜು ಹೇಳಿಕೆಗೆ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿಯವರು ನಮ್ಮ ಸಮಾಜದ ಆಸ್ತಿಯಾಗಿದ್ದಾರೆ. ಅವರ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಯಾರಿಗಾದರೂ ಅನ್ಯಾಯವಾದರೆ ಸ್ವಾಮೀಜಿಗಳು ಮಾತನಾಡುವ ಅವಕಾಶವಿದೆ. ಯಾರೂ ಸಹ ಸ್ವಾಮೀಜಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv