– ರೇವಣ್ಣ ಕಡೆಯವರಿಂದ ಸಂತ್ರಸ್ತೆಯ ಅಪಹರಣ ಪ್ರಕರಣ
– ಪಬ್ಲಿಕ್ ಟಿವಿ ಜೊತೆ ಅಳಲು ತೋಡಿಕೊಂಡ ಕಾರ್ಮಿಕರು
– ಆ ಮಹಿಳೆಯನ್ನು ನಾವು ನೋಡೇ ಇಲ್ಲ
ಮೈಸೂರು: ಶನಿವಾರ 40ಕ್ಕೂ ಹೆಚ್ಚು ಪೊಲೀಸರು (Police) ಬಂದು ಹೊಡೆದಿದ್ದಾರೆ. ಪೊಲೀಸರ ಏಟಿನ ಭಯದಿಂದ ನಾವು ಕೆಲ ಸುಳ್ಳು ಹೇಳಬೇಕಾಯ್ತು ಎಂದು ರಾಜ್‌ಗೋಪಾಲ್ ಅವರ ತೋಟದ ಮನೆಯ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ರಾಜ್‌ಗೋಪಾಲ್ ಅವರ ಹುಣಸೂರು ಪಟ್ಟಣದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾಳೇನಹಳ್ಳಿಯಲ್ಲಿ ತೋಟದ ಮನೆಯಲ್ಲಿ ಅಪಹರಣಕ್ಕೆ ಒಳಗಾದ ಸಂತ್ರಸ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಇಂದು ತೋಟದ ಮನೆಗೆ ಹೋಗಿತ್ತು. ಈ ವೇಳೆ ಅಲ್ಲಿದ್ದ ಇಬ್ಬರು ಕೆಲಸಗಾರರ ಬಳಿ ಮಹಿಳೆಯ ಬಗ್ಗೆ ಮಾತನಾಡಿಸಿದಾಗ ಬಹಳ ಸ್ಫೋಟಕ ವಿಚಾರಗಳು ಹೊರಬಿದ್ದಿದೆ. ಇದನ್ನೂ ಓದಿ: ಆ ಯುವತಿ ನಂಬರ್‌ಗೆ ದಿನಕ್ಕೆರಡು ಬಾರಿ ಕರೆ ಮಾಡ್ತಿದ್ದಾರಂತೆ ಪ್ರಜ್ವಲ್ – ರಹಸ್ಯ ಸ್ಫೋಟ!
ಈ ವೇಳೆ ಒಬ್ಬ ಕಾರ್ಮಿಕ ಮಾತನಾಡಿ, ನಿನ್ನೆ 40 ಹೆಚ್ಚು ಪೊಲೀಸರು ಇಲ್ಲಿಗೆ ಆಗಮಿಸಿದ್ದರು. ನಮ್ಮ ಜೊತೆ ಮಾತನಾಡಿ ಹೊಡೆಯಲು ಆರಂಭಿಸಿದರು. ಈ ವೇಳೆ ನಾನು ಪ್ರಶ್ನೆ ಮಾಡಿ ನನಗೆ ಯಾಕೆ ಹೊಡೆಯುತ್ತೀರಿ ಎಂದು ಕೇಳಿದೆ. ಎರಡು ಪೆಟ್ಟು ಹೊಡೆದ ನಂತರ ನನಗೆ ಹೊಡೆಯುವುದನ್ನು ನಿಲ್ಲಿಸಿದರು ಎಂದು ಹೇಳಿದರು. ಇದನ್ನೂ ಓದಿ: ರೇವಣ್ಣ ಕಿಡ್ನ್ಯಾಪ್ ಕೇಸ್ – ಅಪಹರಿಸಿ ಸಂತ್ರಸ್ತೆಯನ್ನಿರಿಸಿದ್ದ ತೋಟದ ಮನೆ ಪತ್ತೆ, ಕೂಲಿ ಕೆಲಸದಾಕೆ ಅಂತ ಹೇಳಿ ನಮಗೆ ಪರಿಚಯಿಸಲಾಗಿತ್ತು ಎಂದ ಕಾರ್ಮಿಕರು
ಯಾಕೆ ಹೊಡೆದಿದ್ದು ಎಂದು ಪಬ್ಲಿಕ್ ಟಿವಿ ಪ್ರಶ್ನಿಸಿದ್ದಕ್ಕೆ, ಆ ಮಹಿಳೆಯನ್ನು ಹೊರಗೆ ಬಿಟ್ಟಿದ್ದು ಯಾಕೆ ಎಂದು ನಮ್ಮನ್ನು ಪ್ರಶ್ನಿಸಿ ಹೊಡೆದರು. ನಾನು ಮನೆಯ ಮಾಲೀಕರು ಹೇಳಿದಂತೆ ಕೆಲಸ ಮಾಡುತ್ತೇನೆ. ನೀವು ಯಾವುದೇ ವಿಚಾರ ಇದ್ದರೂ ಮಾಲೀಕರನ್ನು ಕೇಳಿ. ನಮಗೆ ವಿಚಾರ ಗೊತ್ತಿಲ್ಲ. ನಮ್ಮನ್ನು ಯಾಕೆ ಹೊಡೆಯುತ್ತೀರಿ ಎಂದು ಪ್ರಶ್ನಿಸಿದೆ ಎಂದು ಕಾರ್ಮಿಕ ಉತ್ತರಿಸಿದರು.
ಈ ವೇಳೆ ಮತ್ತೊಬ್ಬ ಕೆಲಸಗಾರನಿಗೆ ಹೊಡೆದ ವಿಚಾರವನ್ನು ತಿಳಿಸಿದ ಅವರು, ಅವನಿಗೆ ದೊಣ್ಣೆಯಲ್ಲಿ ಹೊಡೆದಿದ್ದಾರೆ. ಅವನಿಗೆ ಭಯ ಜಾಸ್ತಿ. ಯಾವಾಗ ಏಟು ಹೊಡೆದರೋ ಈಗ ಇವನು ಸುಳ್ಳು ಹೇಳುವ ಸನ್ನಿವೇಶಕ್ಕೆ ಬಂದಿದ್ದಾನೆ. ಏಟು ಹೊಡೆಯುವುದನ್ನು ನಾನೇ ಕಣ್ಣಾರೆ ಕಂಡಿದ್ದೀನಿ. ದೊಣ್ಣೆಯಿಂದ ಏಟು ತಿಂದ ಬಳಿಕ ಆತನಿಗೆ ಈಗ ಕೆಲಸ ಮಾಡಲು ಆಗುತ್ತಿಲ್ಲ. ನಿಜವಾಗಿ ಆ ಯಮ್ಮ ಯಾರು ಅಂತಾನೆ ಗೊತ್ತಿಲ್ಲ. ಇಲ್ಲಿಯವರೆಗೆ ನಾನು ಆಕೆಯನ್ನು ನೋಡಿಲ್ಲ ಎಂದು ತಿಳಿಸಿದರು.
ಆರಂಭದಲ್ಲಿ ಪಬ್ಲಿಕ್ ಟಿವಿ ಕಾರ್ಮಿಕರೊಬ್ಬರ ಜೊತೆ ಮಾತನಾಡಿದಾಗ ಮಹಿಳೆಯ ಬಗ್ಗೆ ಹಲವು ವಿಚಾರ ತಿಳಿಸಿದ್ದರು. ಈ ವೇಳೆ ಮತ್ತೊಬ್ಬ ಕೆಲಸಗಾರ ಮಧ್ಯಪ್ರವೇಶಿಸಿ ಆತನಿಗೆ ಭಯ ಜಾಸ್ತಿ. ಹೀಗಾಗಿ ಸುಳ್ಳು ಹೇಳುತ್ತಿದ್ದಾನೆ. ನಿನ್ನೆ ಪೊಲೀಸರು ಬಂದು ನಮಗೆ ಹೊಡೆದಿದ್ದರು ಎಂಬ ವಿಚಾರ ತಿಳಿಸಿದಾಗ ಈ ಮೇಲಿನ ಮಾಹಿತಿಗಳು ಪ್ರಕಟವಾಗಿದೆ.
ರಾಜ್‌ಗೋಪಾಲ್ ಯಾರು?
ರಾಜಗೋಪಾಲ್ ಅವರು ಹುಣಸೂರು ತಾಲ್ಲೂಕಿನ ಹೊಸೂರು ಕೊಡಗು ಕಾಲೊನಿ ಗ್ರಾಮದ ನಿವಾಸಿಯಾಗಿದ್ದಾರೆ. ರೇವಣ್ಣ ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಏಳು ವರ್ಷದ ಹಿಂದೆ ತೋಟದ ಮನೆ ನಿರ್ಮಿಸಿದ್ದ ಇವರು ರೇವಣ್ಣ ಅವರಿಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ನಿರ್ವಹಿಸುತ್ತಿದ್ದಾರೆ.