– ಕೂಲಿ ಕೆಲಸದಾಕೆ ಅಂತ ಹೇಳಿ ನಮಗೆ ಪರಿಚಯಿಸಲಾಗಿತ್ತು ಎಂದ ಕಾರ್ಮಿಕರು
– ಆಕೆ ಕ್ಷಣಕ್ಕೊಂದು ಮಾತನಾಡುತ್ತಿದ್ದಳು, ಸಾಲದ ಕಥೆ ಹೇಳ್ತಿದ್ದಳು
ಮೈಸೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ಮೇಲಿನ ಅಪಹರಣ ಪ್ರಕರಣದ (HD Revanna Kidnap Case) ಸಂತ್ರಸ್ತ ಮಹಿಳೆ ಕಳೆದ 5 ದಿನಗಳಿಂದ ರೇವಣ್ಣನ ಆಪ್ತ ಸಹಾಯಕನ ತೋಟದ ಮನೆಯಲ್ಲಿ ಇದ್ದರು.
ಈ ತೋಟದ ಮನೆ ಇರೋದು ಮೈಸೂರು ಜಿಲ್ಲೆಯ ಹುಣಸೂರು (Hunsur) ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದ ಹೊರ ವಲಯದಲ್ಲಿ. ಈ ತೋಟದ ಮನೆಯಲ್ಲಿ (Farmhouse) ಆಕೆ ಏನು ಮಾಡುತ್ತಿದ್ದರು? ನಿಜವಾಗಿಯೂ ಆಕೆಗೆ ತೊಂದರೆ ಕೊಡುತ್ತಿದ್ರಾ ಅನ್ನೋ? ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಕೂಲಿ ಕೆಲಸಕ್ಕೆ ಬಂದಿರೋ ಮಹಿಳೆ ಅಂತಾ ಹೇಳಿದ್ರು:
ಸಂತ್ರಸ್ತ ಮಹಿಳೆಯನ್ನು ಇಟ್ಟಿದ್ದ ತೋಟದ ಮನೆಯಲ್ಲಿ ಬೇರೆ ಯಾರಿಗೂ ಅನುಮಾನ ಬಾರದಂತೆ ಇರಲು ಸಂತ್ರಸ್ತೆ ಮಹಿಳೆಯನ್ನು ಕೂಲಿಗೆ ಬಂದ ಮಹಿಳೆ ಅಂತಾ ಬಿಂಬಿಸಲಾಗಿತ್ತು. ತೋಟದ ಮನೆಯಲ್ಲಿನ ಕೆಲಸಗಾರರಿಗೆ ಆ ಮಹಿಳೆಯನ್ನು ಹೊಸ ಕೂಲಿಯವಳು ಅಂತಾ ಪರಿಚಯಿಸಲಾಗಿತ್ತು. ಆಕೆ ಕ್ಷಣಕ್ಕೊಂದು ಮಾತಾಡುತ್ತಿದ್ದಳು, ಮಹಿಳೆಯನ್ನು ವಾಪಾಸ್ ಕಳಿಸಿ ಅಂತಾ ಕಾರ್ಮಿಕರು ತೋಟದ ಮಾಲೀಕರಿಗೆ ಹೇಳಿದ್ದರು. ಆದರೆ ಇದಕ್ಕೆ ಮಾಲೀಕ ಒಪ್ಪದೇ ನಿಮಗೆ ಯಾಕೆ ಅಂತ ಸುಮ್ಮನಿರಿಸಿದ್ದರು ಎಂದು ಕಾರ್ಮಿಕರು ಹೇಳಿದ್ದಾರೆ.
ಅಲ್ಲದೇ ನಾವು ಆಕೆಯನ್ನು ಯಾವ ಊರಿನವರು ಎಂದು ಹೇಳಿದಾಗ ಆಕೆ ಹೆಚ್.ಡಿ ಕೋಟೆ ತಾಲೂಕಿನ ಮಹಿಳೆ ಎಂದು ಹೇಳಿಕೊಂಡಿದ್ದಳು. ಅಲ್ಲದೇ 25 ಸಾವಿರ ಸಂಘಕ್ಕೆ ಸಾಲ ಕಟ್ಟಬೇಕು ಅಂತಾ ನಮ್ಮನ್ನೇ ಯಾಮಾರಿಸಿದ್ದಳು. ಇಲ್ಲಿಗೆ ಯಾರು ಕರೆದುಕೊಂಡುಬಂದು ಬಿಟ್ಟರು ಅಂತಾನೂ ಗೊತ್ತಿಲ್ಲ. ಶನಿವಾರ ರಾತ್ರಿ ನೋಡುವಷ್ಟರಲ್ಲಿ ಆಕೆ ಇರಲೇ ಇಲ್ಲ, ಭಾನುವಾರ ಬೆಳಗ್ಗೆ 9:30ರ ವೇಳೆಗೆ ಪೊಲೀಸರೇ ಕರೆತಂದಿದ್ದರು. ಆದ್ರೆ ಇಲ್ಲಿಂದ ಯಾರನ್ನ ಕರೆದುಕೊಂಡು ಹೋಗಿಲ್ಲ. ನಮಗೆ ಮುಂಚೆನೇ ಆಕೆ ಬಗ್ಗೆ ಗೊತ್ತಿದ್ದರೆ ನಾವೇ ಪೊಲೀಸರಿಗೆ ಹಿಡಿದುಕೊಡುತ್ತಿದ್ದೆವು ಎಂದು ಅಲ್ಲಿನ ಕೂಲಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ತೋಟದ ಮನೆಗೆ ರೇವಣ್ಣ ಬಂದಿದ್ರಾ?
ಈ ತೋಟ ರಾಜ್‌ಗೋಪಾಲ್ ಅವರದ್ದು, ರೇವಣ್ಣ ಅವರು ಇಲ್ಲಿಗೆ ಬಂದಿಲ್ಲ, ಈವರೆಗೂ ನಾನು ಅವರನ್ನು ಇಲ್ಲಿ ನೋಡಿಲ್ಲ, ನಾವು ಯಾಕೆ ಸುಳ್ಳು ಹೇಳಬೇಕು ಎಂದು ಕಾರ್ಮಿಕರು ಹೇಳಿದ್ದಾರೆ. ಮತ್ತೊಬ್ಬರು ಕಾರ್ಮಿಕರು ಇಲ್ಲಿ ಮಹಿಳೆ ಇದ್ದುದ್ದನ್ನೇ ನಾವು ನೋಡಿಲ್ಲ ಎಂದಿದ್ದಾರೆ.