ಮಂಡ್ಯ: ಜೆಡಿಎಸ್ ಫ್ಲೆಕ್ಸ್ ಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ (HD DeveGowda)) ಹಿರಿಯ ಮಗ ಹೆಚ್.ಡಿ ರೇವಣ್ಣ ಅವರನ್ನು ಕಿಕ್ ಔಟ್ ಮಾಡಲಾಗಿದೆ.
ಹೌದು. ಕುಮಾರಸ್ವಾಮಿ (hD Kumaraswamy) ಕೇಂದ್ರ ಸಚಿವರಾದ ಬಳಿಕ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಜೆಡಿಎಸ್‍ನಿಂದ ಬೃಹತ್ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಆದರೆ ಈ ಫ್ಲೆಕ್ಸ್ ಗಳಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಫೋಟೋವೇ ಇಲ್ಲ. ಈ ಮೂಲಕ ಮುಜುಗರದಿಂದ ಪಾರಾಗಲು ದಳಪತಿಗಳು ಕ್ರಮ ಕೈಗೊಂಡ್ರಾ ಎಂಬ ಪ್ರಶ್ನೆ ಎದ್ದಿದೆ.
ಫ್ಲೆಕ್ಸ್ ಗಳಲ್ಲಿ ಜೆಡಿಎಸ್ ಮುಖಂಡರ ಜೊತೆಗೆ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೋಟೋಗಳನ್ನು ಬಳಸಲಾಗಿದೆ. ಜೊತೆಗೆ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಫೋಟೋಗೂ ಪ್ಲೆಕ್ಸ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ. ಆದರೆ ರೇವಣ್ಣ (HD Revanna) ಫೋಟೋವನ್ನು ಮಾತ್ರ ಮಂಡ್ಯ ಜೆಡಿಎಸ್ ನಾಯಕರು ಕೈಬಿಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷದಿಂದ ಉಚ್ಛಾಟನೆ ಮಾಡದಿದ್ರೂ ನಾಯಕರು ಅಂತರ ಕಾಯ್ದುಕೊಂಡಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರೇವಣ್ಣ & ಫ್ಯಾಮಿಲಿ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿದೆ. ಕಿಡ್ನಾಪ್ ಕೇಸ್ ನಲ್ಲಿ ರೇವಣ್ಣ ಜೈಲಿಗೆ ಹೋಗಿ ಬಂದರೆ, ಪತ್ನಿ ಭವಾನಿ ರೇವಣ್ಣ ಜಾಮೀನು ಪಡೆದಿದ್ದಾರೆ. ಇನ್ನೊಂದೆಡೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ, ಮತ್ತೊಂದೆಡೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ. ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಇದರಿಂದ ದೇವೇಗೌಡರ ಕುಟುಂಬದ ಜೊತೆಗೆ ಪಕ್ಷಕ್ಕೂ ಡ್ಯಾಮೇಜ್ ಆಗಿದೆ.
ಈ ಡ್ಯಾಮೆಜ್ ಕಂಟ್ರೋಲ್ ಗೆ ರೇವಣ್ಣರಿಂದ ದಳಪತಿಗಳು ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆ ಪಕ್ಷದ ಪ್ರತೀ ಫ್ಲೆಕ್ಸ್ ಗಳಲ್ಲೂ ರೇವಣ್ಣ ಫೋಟೋ ಕಡ್ಡಾಯವಾಗಿ ಇರುತ್ತಿತ್ತು. ರೇವಣ್ಣ ಜೊತೆಗೆ ಪ್ರಜ್ವಲ್, ಸೂರಜ್ ಫೋಟೋ ಕೂಡ ಬಳಸಲಾಗುತ್ತಿತ್ತು. ಒಟ್ಟಿನಲ್ಲಿ ಮಂಡ್ಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದ ರೇವಣ್ಣ ಕುಟುಂಬವನ್ನು ಇದೀಗ ದಳಪತಿಗಳು ದೂರ ಇಟ್ಟಿರುವುದು ಫ್ಲೆಕ್ಸ್ ವಿಚಾರದಲ್ಲಿ ಎದ್ದು ಕಾಣುತ್ತಿದೆ.