ಬೆಂಗಳೂರು: ಇಂದು ಬೆಳಗ್ಗೆ ನಿಮ್ಮ ಪಬ್ಲಿಕ್ ಟಿವಿ ಬಿತ್ತರಿಸಿದ್ದ ವರದಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕೋಪಗೊಂಡಿದ್ದಾರೆ.
ವಾಸ್ತು ಪ್ರಕಾರದಲ್ಲಿ ಕುಮಾರಕೃಪಾ ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿದ್ದು, ಕಟ್ಟಡದ ಅನಗತ್ಯ ನೀರು ರಸ್ತೆಗೆ ಹರಿಯುವಂತೆ ಮಾಡಲಾಗಿದೆ. ಈ ವಿಚಾರವನ್ನು ಇಟ್ಟುಕೊಂಡು ವರದಿ ಮಾಡಿದ್ದಕ್ಕೆ ಅದನ್ನೆಲ್ಲಾ ಕೇಳೊಕೆ ನೀವ್ಯಾರೋ? ನಾನು ನಿಮಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ. ನನ್ನ ಮತ ನೀಡಿ ಬಂದ ಜನರಿಗೆ ಉತ್ತರ ನೀಡುತ್ತೇನೆ. ಕೆಲ ಪತ್ರಿಕೆ ನನ್ನ ಬಗ್ಗೆ ಬರೆದರೂ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಬ್ಲಿಕ್ ಟಿವಿ ಏನೇ ವರದಿ ಬಿತ್ತರಿಸಿದ್ರೂ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.
ಮಳೆಯಾದರೆ ಕುಮಾರಕೃಪಾ ಮುಂದೆ ಮಳೆನೀರು ನಿಂತುಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರನ್ನು ರಸ್ತೆಗೆ ತಿರುಗಿಸಿದ್ದಾರೆ. ಮಳೆಯ ನೀರು ಮತ್ತು ಕಟ್ಟಡದ ಕೊಳಚೆ ನೇರವಾಗಿ ರಸ್ತೆಯ ಮೇಲೆ ಹರಿಯುವ ಸಾಧ್ಯತೆಗಳಿವೆ. ಇದರಿಂದ ಸಹಜವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗಲಿದೆ.
ಅತಿ ಹೆಚ್ಚಾಗಿ ಜೋತಿಷ್ಯ ನಂಬುವ ಸಚಿವರು ಸಾರ್ವಜನಿಕರ ಹಣದಲ್ಲಿ ಸರ್ಕಾರದ ಕಟ್ಟಡವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುತ್ತಿರೋದು ಇದೀಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೊಳಚೆ ನೀರನ್ನು ರಸ್ತೆಗೆ ಹರಿಸುವ ಮೂಲಕ ಕೇವಲ ತಮ್ಮ ಸುರಕ್ಷತೆ ನೋಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಶಿವಾನಂದ ಸರ್ಕಲ್ ಬಳಿ ಇರುವ ಕುಮಾರಕೃಪಾ ಕಟ್ಟಡವನ್ನು ಹೆಚ್.ಡಿ.ರೇವಣ್ಣರಿಗೆ ನೀಡಲಾಗಿದೆ. ಸದ್ಯ ಆಷಾಢ ಮಾಸ ಆಗಿರೋದ್ರಿಂದ ಕಟ್ಟಡಕ್ಕೆ ಪ್ರವೇಶ ನೀಡಿಲ್ಲ. ಆಷಾಢ ಕಳೆಯುತ್ತಿದ್ದಂತೆ ಶ್ರಾವಣ ಮಾಸದ ಆರಂಭದಲ್ಲಿ ಸಚಿವರು ಕುಮಾರಕೃಪಾಕ್ಕೆ ಪ್ರವೇಶಿಸಲಿದ್ದಾರೆ.
ಸಚಿವ ರೇವಣ್ಣರಿಗೆ ಪಬ್ಲಿಕ್ ಟಿವಿ ಪ್ರಶ್ನಾವಳಿ:
1. ನೀವು ಸರ್ಕಾರಿ ದುಡ್ಡಲ್ಲಿ ವಾಸ್ತು ಪ್ರಕಾರ ಮನೆ ನವೀಕರಣ ಮಾಡುತ್ತಿಲ್ವಾ?
2. ಚರಂಡಿ ನೀರು ರಸ್ತೆಗೆ ಬಿಟ್ಟು ಜನರಿಗೆ ಕಿರಿಕಿರಿ ಮಾಡುತ್ತಿಲ್ವಾ?
3. ಪಬ್ಲಿಕ್ ಟಿವಿ ನಿಮ್ಮ ಮೇಲೆ ಸುಖಾಸುಮ್ಮನೆ ವರದಿ ಮಾಡಿಲ್ಲ. ದೃಶ್ಯ ಸಾಕ್ಷಿ ಸಮೇತ ನಿಮ್ಮ ಮುಂದಿಟ್ಟಿದ್ದು ಸುಳ್ಳಾ?
4. ನೀವು ಸಚಿವರಾದ ಮಾತ್ರಕ್ಕೆ ಪ್ರಶ್ನಾತೀತರೇ?