ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಒಂದಿಲ್ಲೊಂದು ತಲೆನೋವು ಎದುರಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಮತ್ತೊಂದು ಕಡೆ ಜೆಡಿಎಸ್ ಗೆ ರೇವಣ್ಣ ಎರಡು ಖಾತೆ ನೀಡಿ ಎಂದು ಪಟ್ಟು ಹಿಡಿದ್ದಾರೆ.
ಎಚ್ ಡಿ ರೇವಣ್ಣರ ಹಠ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಚಿವ ಸಂಪುಟದಲ್ಲಿ ನನಗೆ ಇಂಧನ ಮತ್ತು ಪಿಡಬ್ಲ್ಯೂಡಿ ಎರಡೂ ಖಾತೆಯನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಈ ಬಗ್ಗೆ ಪದ್ಮನಾಭ ನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯಲ್ಲಿ ರೇವಣ್ಣರ 2 ಖಾತೆಯ ಮನವಿಯನ್ನು ತಿರಸ್ಕರಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದು, ಕೇವಲ ಯಾವುದಾದರೂ ಒಂದು ಖಾತೆಯನ್ನು ನಿರ್ವಹಿಸುವಂತೆ ರೇವಣ್ಣಗೆ ಸೂಚಿಸಿದ್ದಾರೆ. ಇಂಧನ ಇಲ್ಲವೇ ಲೋಕೊಪಯೋಗಿ ಖಾತೆಯನ್ನು ನಿರ್ವಹಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
Advertisement
ಈ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರನ್ನು ಮಣಿಸಿದ್ದ ಜಿ. ಟಿ. ದೇವೇಗೌಡ ಅವರು ಲೋಕೋಪಯೋಗಿ ಇಲಾಖೆಯ ಪಟ್ಟು ಹಿಡಿದಿದ್ದಾರೆ. ಮೈಸೂರು ಕ್ಷೇತ್ರದ ಶಾಸಕರುಗಳಾದ ಸಾರಾ ಮಹೇಶ್, ಕೆ ಮಹದೇವ್ ಹಾಗೂ ಅಶ್ವಿನ್ ಕುಮಾರ್‍ರವರು ಜಿಟಿಡಿಯವರಿಗೆ ಸಾಥ್ ನೀಡಿದ್ದಾರೆ. ದೇವೇಗೌಡರು ಚುನಾವಣೆಯಲ್ಲಿ ಜಿಟಿಡಿಗೆ ಉಸ್ತುವಾರಿ ಸಚಿವ ಸ್ಥಾನ ನೀಡುವ ಮಾತುಕೊಟ್ಟ ಹಿನ್ನೆಲೆಯಲ್ಲಿ ಜಿಟಿಡಿಗೆ ಮಂತ್ರಿಸ್ಥಾನ ಸಿಗುವುದು ಪಕ್ಕಾ ಆಗಿದ್ದು ಖಾತೆ ಯಾವುದು ಎನ್ನುವುದು ತಿಳಿಯಬೇಕಿದೆ. ಇದನ್ನೂ ಓದಿ: ಸಿಎಂ ಎಚ್‍ಡಿಕೆಗೆ ಶುರುವಾಯ್ತೆ ಸಹೋದರನ ಕಿರಿಕಿರಿ – ಸಮ್ಮಿಶ್ರ ಸರ್ಕಾರದ ಮೂರನೇ ಹೈಕಮಾಂಡ್ ರೇವಣ್ಣ?