ಚಾಮರಾಜನಗರ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮೂಢನಂಬಿಕೆಗೆ ಕಟುಬಿದ್ದು, ಯಾವಾಗಲೂ ನಿಂಬೆಹಣ್ಣು ಹಿಡಿದುಕೊಂಡು ವಿಧಾನಸೌಧಕ್ಕೆ ಬರುತ್ತಾರೆಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಕೊಳ್ಳೆಗಾಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇವಣ್ಣನವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆ ಇಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರನ್ನು ಹೇಗೆ ನಂಬುತ್ತಾರೆ. ಅವರು ರಾಹುಕಾಲ, ಗುಳಿಕಕಾಲ ನೋಡಿಕೊಂಡು ಕೆಲಸ ಮಾಡುತ್ತಾರೆ. ಮೂಢನಂಬಿಕೆಗೆ ಕಟುಬಿದ್ದು ವಿಧಾನಸೌಧಕ್ಕೆ ನಿಂಬೆಹಣ್ಣು ಇಟ್ಟುಕೊಂಡು ಬರುತ್ತಾರೆ. ಬೇಕಾದರೇ ಅವರು ಬಂದಾಗ ನಿಮ್ಮ ಕ್ಯಾಮೆರಾ ಝೂಮ್ ಮಾಡಿ ನೋಡಿ. ನಿಮಗೆ ಅರ್ಥವಾಗುತ್ತದೆ. ಯಾರೋ ಅವರಿಗೆ ಹೇಳಿರಬೇಕು. ಹೀಗಾಗಿ ಬೆಂಗಳೂರಿನಿಂದ ವಿಧಾನಸೌಧಕ್ಕೆ ಬರದೆ, ಪ್ರತಿನಿತ್ಯ ಹಾಸನದಿಂದ ನೇರವಾಗಿ ವಿಧಾನಸೌಧಕ್ಕೆ ಬರುತ್ತಾರೆ. ಕೆಲವೊಮ್ಮೆ ಚಪ್ಪಲಿ ಹಾಕದೇಯೂ, ಹಾಗೆಯೇ ಬರುತ್ತಾರೆಂದು ಹೇಳಿದ್ರು.
Advertisement
Advertisement
ರೇವಣ್ಣ ಗುಳಿಕಕಾಲ ನೋಡಿಕೊಂಡು ವಿಧಾನಸೌಧಕ್ಕೆ ಬರುವುದರಿಂದ ಯಾವುದೇ ಚರ್ಚೆಗಳು ಸರಿಯಾಗಿ ಆಗುತ್ತಿಲ್ಲ. ಅಲ್ಲದೇ ಯೋಜನೆಗಳಿಗೆ ಸಂಬಂಧಿಸಿದ ಯಾವುದೇ ಬಿಲ್‍ಗಳು ಪಾಸ್ ಆಗುತ್ತಿಲ್ಲ. ಈಗ ರಾಹುಕಾಲ ಬಂದಿರುವುದರಿಂದ ಅವರ ಕುಟುಂಬ ಟೆಂಪಲ್ ರನ್ ಮಾಡುತ್ತಿದೆ. ರಾಹುಕಾಲ ಬಂದ ಮೇಲೆ ಅಧಿಕಾರ ಹೋಗಲೇಬೇಕು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ತಿಳಿಸಿದರು.
Advertisement
ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ನಾವು ಬೀಳಿಸಲು ಹೋಗಲ್ಲ. ಆಪರೇಷನ್ ಕಮಲ ಮಾಡುವ ಅವಶ್ಯಕತೆಯೂ ನಮಗಿಲ್ಲ. ಸಮ್ಮಿಶ್ರ ಸರ್ಕಾರ ಅದಾಗಿಯೇ ಪತನಗೊಳ್ಳಲಿದೆ. ಸರ್ಕಾರವನ್ನು ಬೀಳಿಸಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಇಬ್ಬರೇ ಸಾಕು. ಸರ್ಕಾರದ ಎಲ್ಲಾ ಮಾತುಕತೆಗಳು ಇವರಿಬ್ಬರ ಮನೆಯಲ್ಲಿಯೇ ನಡೆಯೋದು. ಈ ಹಿಂದೆ ಸಿದ್ದರಾಮಯ್ಯ ಧರ್ಮಸ್ಥಳ ಹಾಗೂ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ಸರ್ಕಾರಕ್ಕೆ ಭೂಕಂಪವೇ ಆಗಿ ಹೋಗಿತ್ತು. ಆಗ ಕೆಲವು ಶಾಸಕರು ರೆಸಾರ್ಟ್‍ನತ್ತ ಮುಖಮಾಡಿದ್ದರೆ, ಮತ್ತೆ ಕೆಲವರು ಬೇರೆ ರಾಜ್ಯಗಳಿಗೆ ಹೋಗಿದ್ದರು ಎಂದು ಟಾಂಗ್ ನೀಡಿದರು.
Advertisement
ಈಗಾಗಲೇ ಕಾಂಗ್ರೆಸ್ಸಿನ 50 ಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಬೇಕೆಂದು ಹೇಳುತ್ತಿದ್ದಾರೆ. ಅಲ್ಲದೇ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಗೊಂದಲ ನಿರ್ಮಾಣವಾಗಿದೆ. ಖಾಲಿ ಇರುವ 6 ಸ್ಥಾನಗಳಿಗೆ 50 ಆಕಾಂಕ್ಷಿಗಳಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರೇ ಸಮ್ಮಿಶ್ರ ಸರ್ಕಾರ ಸೂಸೈಡ್ ಬಾಂಬರ್ ಗಳೆಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv