ಬಳ್ಳಾರಿ: ಕಾರ್ಯಕರ್ತರು ಟೋಪಿ ಹಾಕುತ್ತಾರೆ ಎನ್ನುವ ಅರ್ಥದಲ್ಲಿ ನಾನು ಹೇಳಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ, ಅವರು ಯಾವ ರೀತಿ ಮಾಡಿದ್ದಾರೆಂಬುದು ಅಲ್ಲಿನ ಜನರಿಗೆ ಗೊತ್ತು. ನಾನು ಕಾರ್ಯಕರ್ತರು ಟೋಪಿ ಹಾಕುತ್ತಾರೆ ಎಂದು ಹೇಳಿಲ್ಲ. ರಾಮನಗರ ಜನ ಕುಮಾರಸ್ವಾಮಿಯವರ ಕುಟುಂಬದವರೇ ಇಲ್ಲಿನ ಮುಂದಿನ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅನಿತಾ ಕುಮಾರಸ್ವಾಮಿಯವರನ್ನು ಅಲ್ಲಿಂದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲಾಯಿತು. ನನ್ನ ಹೇಳಿಕೆಯಿಂದ ಅನಿತಾರವರ ಗೆಲುವಿಗೆ ಯಾವುದೇ ತೊಂದರೆ ಆಗಲ್ಲ. ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ ಜೆಡಿಎಸ್ ಬರುತ್ತಿಲ್ಲವೆಂದು ಪ್ರಶ್ನಿಸಿದಾಗ, ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿಯೇ ಚುನಾವಣೆಯನ್ನು ನಾವು ಎದುರಿಸುತ್ತಿದ್ದೇನೆ. ನಾನು ಸಹ ಖುದ್ದು ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾನೆ. ಇಂದೂ ಸಹ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ಮಾಡುತ್ತಿದ್ದೇನೆ. ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಎಲ್ಲಾ ಸ್ಥಳೀಯ ಮಟ್ಟದ ಮುಖಂಡರು ಸಹ ಚುನಾವಣೆಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುತ್ತಿಲ್ಲವೆಂಬುದು ಸುಳ್ಳು ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ರೆ, ಟೋಪಿ ಹಾಕಿ ಹೋಗ್ತಾರೆ: ಎಚ್.ಡಿ.ರೇವಣ್ಣ
ಪ್ರಜ್ವಲ್ ರಾಜಕೀಯದ ಕುರಿತು ಮಾತನಾಡಿದ ಅವರು, ಪ್ರಜ್ವಲ್ ರಾಜಕೀಯಕ್ಕೆ ಬರಬೇಕು ಅಂದುಕೊಂಡರೇ, ಅದನ್ನು ಯಾರು ತಡಿಯೋಕೆ ಆಗಲ್ಲ. ನಾವು ಯಾವತ್ತೂ ಸಹ ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದವರಲ್ಲ. ಈ ಹಿಂದೆ ಹಾಸನದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೆಂಡತಿ ಹಾಗೂ ಮಗ ಕ್ಷೇತ್ರಕ್ಕೆ ತ್ಯಾಗ ಮಾಡಿ, ಅಲ್ಲಿ ವೀರಶೈವ ಸಮುದಾಯದವರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಪ್ರಜ್ವಲ್ ರಾಜಕೀಯಕ್ಕೆ ಬರುವುದನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ನಿಖಿಲ್ ಹಾಗೂ ಪ್ರಜ್ವಲ್‍ಗೆ ಯಾವುದೇ ಟಿಕೆಟ್ ಸಿಗದಿದ್ದರೇ, ಅವರು ಪಕ್ಷದ ಕಾರ್ಯಕರ್ತರಾಗಿಯೇ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv