ಹಾಸನ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ಮುಕ್ತವಾಗಿ ನಡೆದಿದೆ ಎಂದು ಹೇಳಿರುವ ಜಿಲ್ಲಾಧಿಕಾರಿಗಳೇ, 10 ದಿನಗಳ ಬಳಿಕ ಚುನಾವಣಾ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ಏಕೆ ದೂರು ಪಡೆದುಕೊಂಡರು. ಈ ಬಗ್ಗೆ ತನಿಖೆ ಆಗಬೇಕು, ಅಲ್ಲದೇ ಕೂಡಲೇ ಅವರನ್ನು ವರ್ಗಾವಣೆ ಮಾಡಿ ಬೇಕು. ಅವರು ವರ್ಗಾವಣೆ ಆಗಿ ಬಂದ ಬಳಿಕ ನಡೆದ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಕ್ತ ತನಿಖೆ ನಡೆಸಬೇಕಿದೆ. ಈ ಕುರಿತು ಶೀಘ್ರವಾಗಿ ಆಯೋಗಕ್ಕೆ ಲಿಖಿತ ಮನವಿ ನೀಡಲಾಗುವುದು ಎಂದರು.
Advertisement
Advertisement
ಹೊಳೆನರಸೀಪುರ ತಾಲೂಕಿನ ಪಡವಲಹಿಪ್ಪೆಯ ಮತಗಟ್ಟೆ ಯಲ್ಲಿ ಅಕ್ರಮ ಮತದಾನ ಮಾಡಿದ್ದಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಒಂದು ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಅಕ್ರಮ ಮತದಾನದ ಕುರಿತು ತನಿಖೆ ನಡೆಸಬೇಕಾದರೆ ಮತಗಟ್ಟೆಯಲ್ಲಿ ಅಳವಡಿಸುವ ಸಿಸಿಟಿವಿ ಪರಿಶೀಲನೆ ನಡೆಸಲಿ. ಈ ಬಗ್ಗೆ ಯಾವ ಯುವಕ ಮತದಾನ ಮಾಡಿದ್ದಾನೆ ಎನ್ನುವುದು ತಿಳಿಯುತ್ತದೆ. ಅಲ್ಲದೇ ತನಿಖೆ ವೇಳೆ ಏಕೆ ನಮ್ಮ ಬೂತ್ ಏಜೆಂಟ್ ವಿಚಾರಣೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
Advertisement
Advertisement
ಯಾವುದೇ ದಾಖಲೆಗಳನ್ನು ಸೃಷ್ಟಿಸುವ ಸನ್ನಿವೇಶ ಇದ್ದು, ಮುಕ್ತವಾಗಿ ಮತ ಎಣಿಕೆ ಮಾಡಿಸುವ ಕುರಿತು ನಮಗೆ ನಂಬಿಕೆ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಹೇಳಿದರು. ಅಲ್ಲದೇ ಜಿಲ್ಲಾಧಿಕಾರಿಗಳ ವರ್ಗಾವಣೆ 10 ದಿನ ಮುನ್ನವೇ ಇವರೇ ಜಿಲ್ಲಾಧಿಕಾರಿಗಳು ಎಂದು ಹೇಳಲಾಗುತ್ತಿತ್ತು. ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಡಿಸಿ ಅವರು ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿದ್ದರು. ಅವರಿಂದ ನಿರ್ದೇಶನ ಪಡೆದು ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮನೆಯಲ್ಲಿ ಹಾಲಿ ಜಿಲ್ಲಾಧಿಕಾರಿ ಮನೆಯಲ್ಲಿ ಯಾಕೆ ಇದ್ದರು ಎಂದು ಪ್ರಶ್ನಿಸಿದ ಸಚಿವರು, ಈ ಕುರಿತು ತನಿಖೆ ಮಾಡಬೇಕೆಂದು ಆಯೋಗಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.