ಕಲಬುರಗಿ: ನೀವು ಐದರಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದೀರಿ. ನಿಮ್ಮ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಅಂತ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲಾಯಕ್ ಎಂಬ ಪದ ಬಳಸಿದ ಅನಂತ್ ಕುಮಾರ್ ಹೆಗಡೆಯವರೇ ನಿಮ್ಮ ಕ್ಷೇತ್ರದಲ್ಲಿ ಇರುವ ಕಾರ್ಖಾನೆ ಬಂದ್ ಆಗುತ್ತಿವೆ. ಹಾಗಾದ್ರೆ ನಿಮ್ಮನ್ನು ನೀವೇ ನಾಲಾಯಕ್ ಅಂತ ಹೇಳಿಕೊಂಡತ್ತಾಗುತ್ತೆ ಅಂತ ತಿರುಗೇಟು ನೀಡಿದ್ರು. ಅಲ್ಲದೇ ವಾಮಮಾರ್ಗದಿಂದ ಅನಂತಕುಮಾರ್ ಹೆಗ್ಡೆ ಪ್ರಚಾರ ಪಡೆಯುತ್ತಿದ್ದಾರೆ ಅಂದ್ರು.
ರಾಯಚೂರಿನ ಇಬ್ಬರು ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಸಂಬಂಧ ಮಾತನಾಡಿದ ಅವರು, ಆ ಇಬ್ಬರು ಶಾಸಕರು ಎರಡು ದೋಣಿಯಲ್ಲಿ ಕಾಲಿಟ್ಟು ಎರಡು ವರ್ಷಗಳಾಗಿವೆ. ಅವರಿಬ್ಬರಿಂದಾಗಿ ಬಿಜೆಪಿಗೆ ಇದೀಗ ಆನೆ ಬಲ ಬಂದಿದೆ ಅಂತಾ ಬಿಎಸ್‍ವೈ ಹೇಳಿದ್ದಾರೆ. ಹಾಗಾದ್ರೆ ಇಷ್ಟು ದಿನ ಬಿಜೆಪಿಗೆ ಶಕ್ತಿಯಿರಲಿಲ್ಲ. ಆ ಇಬ್ಬರು ನಾಯಕರು ಶಾಸಕರಾದ ಬಳಿಕ ಪಕ್ಷದ ಜೊತೆಗಿಲ್ಲ. ಅವರು ಪಕ್ಷ ಬಿಟ್ಟರೂ ಜೆಡಿಎಸ್ ಗೆ ತೊಂದರೆಯಾಗಲ್ಲ. ಆ ಇಬ್ಬರು ನಾಯಕರಿಗಿಂತ ಸಮರ್ಥ ಅಭ್ಯರ್ಥಿಗಳು ನಮ್ಮಲ್ಲಿದ್ದಾರೆ. ಮಿಷನ್ 150 ಕನಸು ಕಾಣುವ ಬಿಜೆಪಿ ಬೇರೆ ಪಕ್ಷದ ಶಾಸಕರನ್ನು ಸೆಳೆಯುತ್ತಿದೆ ಅಂತ ಹೇಳಿದ್ರು. ಇದನ್ನೂ ಓದಿ: ಚುನಾವಣೆಗೂ ಮೊದಲೇ ಆಪರೇಷನ್ ಕಮಲ- ಜೆಡಿಎಸ್‍ಗೆ ಇಬ್ಬರು ಶಾಸಕರು ಗುಡ್ ಬೈ
ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಹೆಚ್‍ಡಿಕೆ, ಬಿಎಸ್‍ವೈ ಚೆಕ್ ಮುಖಾಂತರ ಹಣ ಪಡೆದು ಫಜೀತಿಗೆ ಬಿದ್ದಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಚೆಕ್ ಮುಖಾಂತರ ಹಣ ಪಡೆಯಲ್ಲ. ರಾಮನ ಲೆಕ್ಕ-ಕೃಷ್ಣನ ಲೆಕ್ಕದಲ್ಲಿ ಹಣ ಪಡೆಯುತ್ತಾರೆ. ಅದಕ್ಕಾಗಿ ವಿಶೇಷ ವಿಮಾನ ಇಟ್ಟಿದ್ದಾರೆ. ಅದಕ್ಕಾಗಿ ಮೂರು ನಾಲ್ಕು ಸಚಿವರನ್ನು ಇಟ್ಟಿದ್ದಾರೆ. ಇದಕ್ಕೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರೇ ಉದಾಹರಣೆ. ನಾನು ಹಿಟ್ & ರನ್ ಮಾಡಲ್ಲ ಅಂತ ಹೇಳಿದ್ರು.
ಇತ್ತೀಚೆಗೆ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್ ಹಾಗೂ ರಾಯಚೂರು ನಗರ ಕ್ಷೇತ್ರದ ಡಾ. ಶಿವರಾಜ್ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿದ್ದರು.