ಅಳಿಯನನ್ನು ತಂದು ನೇತ್ರಾವತಿಯಲ್ಲಿ ಬೀಳಿಸಿದ್ದಾಯ್ತು: ಎಸ್‍ಎಂಕೆ ವಿರುದ್ಧ ಎಚ್‍ಡಿಕೆ ಪರೋಕ್ಷ ಕಿಡಿ

Public TV
3 Min Read
mng hdk 2

ಮಂಗಳೂರು: ಮಾಜಿ ಸಿಎಂ ಎಚ್ ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಎಸ್.ಎಂ ಕೃಷ್ಣ ಅವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ನಗರದಲ್ಲಿ ಗೋಲಿಬಾರ್ ಬಗ್ಗೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಒಬ್ಬರಿದ್ದಾರೆ. ಅವರದ್ದು 5 ಜೀವನ ಚರಿತ್ರೆ ಬರುತ್ತದೆಯಂತೆ. ಇದು ಅಸಹ್ಯ ಸರ್ಕಾರ. ಈ ಹಿಂದೆ ಮೈತ್ರಿ ಸರ್ಕಾರ ಪತನವಾಗಲು ನಾನು ಕಾರಣ ಎಂದಿದ್ದರು. ಆ ಮಾಜಿ ಮುಖ್ಯಮಂತ್ರಿಗೆ ಕೇಳುತ್ತಿದ್ದೇನೆ ಈಗ ಇರುವುದು ಯಾವ ಸರ್ಕಾರ ಎಂದು ಹೇಳಲಿ. ಕಾಂಗ್ರೆಸ್ಸಿನಲ್ಲಿ ಎಲ್ಲವನ್ನೂ ಅನುಭವಿಸಿ, ಈಗ ಬಿಜೆಪಿಯಲ್ಲಿದ್ದಾರೆ. ಪಾಪ ಅಳಿಯನನ್ನು ತಂದು ನೇತ್ರಾವತಿಯಲ್ಲಿ ಕೆಡವಾಯ್ತು. ನಾಚಿಗೆ ಆಗಬೇಕು ಇವರಿಗೆಲ್ಲ. ಇವರೆಲ್ಲ ರಾಜಕೀಯ ವ್ಯಕ್ತಿಗಳಾ ಎಂದು ಪ್ರಶ್ನಿಸಿ, ಎಸ್. ಎಂ ಕೃಷ್ಣ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಎಚ್‍ಡಿಕೆ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಂದುತ್ವ ಅಂತ ಭಾಷಣ ಬಿಗಿಯೋ ನಾಯಕರು ಮಾನವೀಯತೆ ಕಳೆದುಕೊಂಡಿದ್ದಾರೆ: ಹೆಚ್‍ಡಿಕೆ

mng hdk

ಈಗಿರುವ ಸರ್ಕಾರವೇನು ಗೃಹ ಸಚಿವರ ಆದೇಶದ ಮೇಲೆ ನಡೀತಿದೆಯೋ? ಇಲ್ಲ ಕಲ್ಲಡ್ಲ ಪ್ರಭಾಕರ್ ಭಟ್ ಸೂಚನೆ ಮೇಲೆ ಅಧಿಕಾರಿಗಳು ಕೆಲಸ ಮಾಡ್ತಿದ್ದೀರಾ? ಗಲಾಟೆ ನಡೆಯುವ ಹಿಂದಿನ ದಿನ ಕಲ್ಲಡ್ಕ ಪ್ರಭಾಕರ್ ಮನೆಯಲ್ಲಿ ಅಧಿಕಾರಿಗಳು ಇದ್ದರು. ಇದರ ಬಗ್ಗೆ ತನಿಖೆ ಮಾಡ್ತೀರಾ ಎಂದು ಪ್ರಶ್ನಿಸಿ ಏಕವಚನದಲ್ಲೆ ಕಲ್ಲಡ್ಕ ಪ್ರಭಾಕರ್ ವಿರುದ್ಧ ಗುಡುಗಿದರು.

ಯಡಿಯೂರಪ್ಪಗೆ ಮಾನ ಮಾರ್ಯಾದೆ ಇದ್ದರೆ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ, ಅವರನ್ನ ಜೈಲಿಗೆ ಕಳುಹಿಸಲಿ. ಇವರ ಯೋಗ್ಯತೆಗೆ ಇದೊಂದು ಸರ್ಕಾರನಾ? ಸತ್ತವರ ಮೇಲೂ ಎಫ್‍ಐಆರ್ ಹಾಕಿದ್ದಾರೆ. ಅನಾಗರಿಕವಾಗಿ ಜನರನ್ನ ಕೊಂದಿದ್ದೀರಾ ನೀವು. ಕಮಿಷನರ್ ಹೇಳ್ತಾನೆ 7 ಸಾವಿರ ಜನ ಮಾಬ್ ಇತ್ತು ಅಂತ. ಅದಕ್ಕೆ ಬೀದಿ ಬೀದಿಯಲ್ಲಿ ಸಿಕ್ಕವರಿಗೆ ಹೊಡೆದ್ರೆ ಹೇಗೆ? ಐಎಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರೆ, ಗಣಪತಿ ಆತ್ಮಹತ್ಯೆ ಆದಾಗ ಗೃಹ ಮಂತ್ರಿ ಜವಾಬ್ದಾರಿ ಅಂದರು. ಈಗ ಎರಡು ಸಾವಾಗಿದೆ ಇದರ ಜವಾಬ್ದಾರಿ ಯಾರು? 15 ಜನರಿಗೆ ಪ್ರಮಾಣ ವಚನ ಬೋಧನೆ ಮಾಡ್ತಿದ್ದಾರೆ. 20-25 ಲಕ್ಷ ಖರ್ಚು ಮಾಡಿ ಪ್ರಮಾಣ ವಚನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

BSY

ವಿಪಕ್ಷ ನಾಯಕರಿಗೂ ನಿರ್ಬಂಧ ಹಾಕಿದರು. ಏನೋ ಖಾದರ್ ಭಾಷಣ ಮಾಡೋವಾಗ ಹೊತ್ತಿ ಉರಿದು ಹೋಗುತ್ತೆ ಅಂತ ಹೇಳಿ ಬಿಟ್ಟರು. ಅದಕ್ಕೆ ಇಷ್ಟೆಲ್ಲ ಮಾತಾಡುತ್ತಿದ್ದಾರೆ. ಪಾಪ ಇಲ್ಲಿ ಏನೋ ಮಾತಾಡಿದರು ಅಂತ ಖಾದರ್ ವಿರುದ್ಧ ಮಾತಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಯಡಿಯೂರಪ್ಪ, ಕಟೀಲು, ಶೋಭಾ ಬೆಂಕಿ ಹಚ್ಚಿತ್ತೇನೆ ಅಂತ ಹೇಳಿರಲಿಲ್ಲವಾ? ಯಾರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಆರ್‍ಎಸ್‍ಎಸ್ ಡ್ರೆಸ್ ಹಾಕಿಕೊಂಡು ಆಸ್ಪತ್ರೆಗೆ ನುಗ್ಗಿದ್ದಾರೆ ಅಂತ ನನಗೆ ಅನುಮಾನ ಇದೆ ಎಂದು ಪರೋಕ್ಷವಾಗಿ ಆರ್‍ಎಸ್‍ಎಸ್ ಕಡೆ ಮಾಜಿ ಸಿಎಂ ಬೊಟ್ಟು ಮಾಡಿದರು.

MNG Protest 4

ಇದೇನು ಪೊಲೀಸ್ ರಾಜ್ಯ ಮಾಡಲು ಹೊರಟಿದ್ದೀರಾ? ನಾನು ಸಿಎಂ ಆಗಿದ್ದಾಗ ಇಂತಹ ಒಂದೇ ಒಂದು ಘಟನೆ ಆಗಿಲ್ಲ. 24 ಗಂಟೆಯೊಳಗೆ ಸಿಎಂ ಅಧಿಕಾರಿಗಳ ವಿರುದ್ಧ ಕ್ರಮ ತಗೋಬೇಕು. ಕೂಡಲೇ ಅವರನ್ನ ಬಂಧನ ಮಾಡಬೇಕು. ಯಾರೋ ಒಬ್ಬರು ಸದನಕ್ಕೆ ಬಂದು ಚರ್ಚೆ ಮಾಡಲಿ ಅಂತ ಹೇಳಿದ್ದೀರಾ. ಏನ್ ಕಿತ್ತು ಗುಡ್ಡೆ ಹಾಕಿದ್ದೀರಾ ಅಂತ ಚರ್ಚೆ ಮಾಡಬೇಕು ಎಂದು ಹರಿಹಾಯ್ದರು.

33 ಪೊಲೀಸರಿಗೆ ಗಾಯ ಆಗಿಲ್ಲ. ಇಬ್ಬರಿಗೆ ಮಾತ್ರ ಗಾಯ ಆಗಿದೆ. ಪೊಲೀಸರು ಸುಳ್ಳು ಹೇಳ್ತಿದ್ದಾರೆ. ಗಾಯಗೊಂಡ ಪೊಲೀಸರು ಯಾವ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ತೋರಿಸಿ ಎಂದು ಎಚ್‍ಡಿಕೆ ಅವರು ಕಮಿಷನರ್ ಅವರನ್ನು ಪ್ರಶ್ನಿಸಿದರು. ಹಾಗೆಯೇ ಜೆಡಿಎಸ್ ಪಕ್ಷ ಯಾರನ್ನೂ ಹುಡುಕಿಕೊಂಡು ಹೋಗಲ್ಲ. ಬಿಜೆಪಿ, ಕಾಂಗ್ರೆಸ್ ಅವರು ನಮ್ಮ ಪಕ್ಷ ಹುಡುಕಿಕೊಂಡು ಬರಬೇಕು. ನಾನು ಕೋಮುವಾದಕ್ಕೆ ಬೆಂಬಲ ಕೊಡುವುದಿಲ್ಲ. ಜನರ ಪರ ಇರುತ್ತೇನೆ. ಸಿದ್ದರಾಮಯ್ಯಗೆ ಅವಕಾಶ ಕೊಡಲಿಲ್ಲ, ನಿಮಗೆ ಹೇಗೆ ಕೊಟ್ಟರು? ಮತ್ತೊಂದು ಗೋದ್ರಾ ಹತ್ಯಾಕಾಂಡ ಆಗುತ್ತಾ ಅಂತ ಸಚಿವರು ಹೇಳುತ್ತಾರೆ. ಅದನ್ನ ಆಗೋಕೆ ಬಿಡ್ತೀವಾ? ಇಂತಹ ಮಂತ್ರಿಗಳನ್ನು ಇಟ್ಟುಕೊಂಡು ಸಿಎಂ ಸರ್ಕಾರ ನಡೆಸುತ್ತಿದ್ದಾರೆ. ಮಾಡಲಿ ಮಾಡಲಿ ಅದೆಷ್ಟು ದಿನ ಮಾಡ್ತಾರೋ ನೋಡ್ತೀನಿ ಎಂದು ಸಚಿವ ಸಿಟಿ ರವಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *