ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಡಿಕೆ ಶಿವಕುಮಾರ್ ಮೇಲೆ ಪ್ರೀತಿ ಇಲ್ಲ. ಪ್ರೀತಿ ಇದ್ದಿದ್ದರೆ ಅವರು ನನ್ನ ಹೋರಾಟಕ್ಕೆ ಬರುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಕುಮಾರಸ್ವಾಮಿಯವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಪ್ರತಿಭಟನೆಗೆ ಬರಬೇಕು ಎಂದೇನಿಲ್ಲ. ನಮಗೆಲ್ಲ ಡಿ.ಕೆ.ಶಿವಕುಮಾರ್ ಮೇಲೆ ಪ್ರೀತಿ ಇದ್ದಿದ್ದರಿಂದ ನಾವು ಹೋಗಿದ್ದೆವು. ನಮ್ಮ ಸಮುದಾಯದ ಮುಖಂಡನಿಗೆ ಅನ್ಯಾಯವಾದಾಗ ಪ್ರತಿಭಟಿಸುವುದು ನಮ್ಮ ಭಾವನೆ. ಆದರೆ ಕುಮಾರಸ್ವಾಮಿಯವರಿಗೆ ಆ ಭಾವನೆ ಇರಲಿಲ್ಲ. ಇದ್ದಿದ್ದರೆ ಖಂಡಿತ ನಮ್ಮ ಹೋರಾಟಕ್ಕೆ ಬರುತ್ತಿದ್ದರು. ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಇದಲ್ಲ. ಸಮುದಾಯದ ಕಾರ್ಯಕ್ರಮ ನಡೆಯುವಾಗ ಆಮಂತ್ರಣ ಕೊಡುವಂಥದ್ದು ಎಲ್ಲೂ ಇಲ್ಲ. ಹೋರಾಟಕ್ಕೆ ಬಂದಿದ್ದ 25 ಸಾವಿರ ಜನಕ್ಕೂ ಆಮಂತ್ರಣ ಕೊಟ್ಟಿದ್ದಾರಾ? ಒಕ್ಕಲಿಗರಲ್ಲಿ ಸ್ವಪ್ರತಿಷ್ಠೆ ಹೆಚ್ಚಾಗಿದೆ. ಕೇವಲ ಕುಮಾರಸ್ವಾಮಿಯವರ ವಿಚಾರ ಅಷ್ಟೇ ಅಲ್ಲ. ಗ್ರಾಮೀಣ ಪ್ರದೇಶದಲ್ಲೂ ಒಕ್ಕಲಿಗರಲ್ಲಿ ಪ್ರತಿಷ್ಠೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ತಿಮ್ಮೇಗೌಡ 5 ಮರಿ ಕಡಿದರೆ, ರಾಮೇಗೌಡ 15 ಮರಿ ಕಡಿಯುತ್ತಾನೆ. ಹೀಗೆ ವೈಯಕ್ತಿಕ ಪ್ರತಿಷ್ಠೆಗಳನ್ನು ಇಟ್ಟುಕೊಂಡು ಸಮಾಜ ಕೆಡುತ್ತಿದೆ. ಸಮಾಜದ ವಿಚಾರ ಬಂದಾಗ ಸ್ವಪ್ರತಿಷ್ಠೆ ಬಿಟ್ಟು ಒಂದಾಗಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
Advertisement
ಕದ್ದಾಲಿಕೆ ನಿಜ: ಮಾಜಿ ಸಿಎಂ ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದರೆ ಅವರನ್ನು ಬಂಧಿಸಲಿ ಬಿಡಿ, ಬೇಡ ಎಂದು ಹೇಳಿದವರು ಯಾರು? ಮಾಡಬಾರದನ್ನು ಮಾಡಿ ದುಡ್ಡು ಹೊಡೆದಿದ್ದರೆ ಅವರನ್ನು ಬಂಧಿಸುತ್ತಾರೆ. ಅವರನ್ನು ಬಂಧಿಸಬಾರದು ಎಂಬ ಕಾನೂನು ಇದೆಯೇ? ನನಗಿರುವ ಮಾಹಿತಿ ಪ್ರಕಾರ ಫೋನ್ ಕದ್ದಾಲಿಕೆ ಆಗುತ್ತಿದ್ದು ನಿಜ ಎಂದು ಸ್ಪಷ್ಟಪಡಿಸಿದರು.
Advertisement
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಯಾರು ಹೊಣೆಗಾರರು ಅವರಿಗೆ ಶಿಕ್ಷೆ ಆಗಬೇಕು. ನನ್ನ ಫೋನ್ ಕೂಡ ಕದ್ದಾಲಿಕೆ ಆಗುತಿತ್ತು, ವಿಷಯ ಗೊತ್ತಾಗುತ್ತಿದ್ದಂತೆ ಫೋನ್ ನಂಬರ್ ಬದಲಿಸಿದೆ. ನಾನು ಸರ್ಕಾರದ ಅಂಗವಾಗಿದ್ದರೂ ನನ್ನ ಫೋನ್ ಕದ್ದಾಲಿಕೆ ಆಗುತಿತ್ತು. ಕುಮಾರಸ್ವಾಮಿಯವರು ನನ್ನ ಮೇಲೆ ಅನುಮಾನ ಪಟ್ಟಿದ್ದರೇನೋ ಗೊತ್ತಿಲ್ಲ ಎಂದು ಫೋನ್ ಕದ್ದಾಲಿಕೆ ಕುರಿತು ಶ್ರೀನಿವಾಸ್ ಹೊಸ ಬಾಂಬ್ ಸಿಡಿಸಿದ್ದಾರೆ. ನಿನ್ನೆ ನಡೆದ ಪ್ರತಿಭಟನೆ ಕೇವಲ ಒಕ್ಕಲಿಗ ಸಮುದಾಯದ್ದಾಗಿರಲಿಲ್ಲ. ಎಲ್ಲ ಸಮುದಾಯದ ಜನ ಸೇರಿದ್ದರು. ಡಿಕೆಶಿ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳು ಎಲ್ಲರೂ ಸೇರಿದ್ದರು ಎಂದು ತಿಳಿಸಿದರು.