ರಾಮನಗರ: ಶಾಸಕ ಜಮೀರ್ ಅಹ್ಮದ್ ಖಾನ್‍ರವರು ನನ್ನ ರಾಜಕೀಯ ವಿರೋಧಿಗಳು ನನ್ನ ಬಗ್ಗೆ 3-4 ಕಂಪ್ಲೇಂಟ್ ನೀಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಜಮೀರ್ ಬಗ್ಗೆ ಯಾರು ದೂರು ನೀಡಿದ್ದಾರೆಂದು ಇಡಿ ಅವರೇ ಹೇಳಬೇಕು. ನಾನಂತೂ ಯಾರ ಬಗ್ಗೆ ಕೂಡ ದೂರು ನೀಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಡದಿಯಲ್ಲಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಮನೆ ಬಗ್ಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಂತೂ ಯಾರ ಬಗ್ಗೆ ಕೂಡ ದೂರು ನೀಡಿಲ್ಲ. ಯಾರು ದೂರು ಕೊಟ್ಟಿದ್ದಾರೋ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ ಎಂದಿದ್ದಾರೆ.
ಕೇಂದ್ರ ಸರ್ಕಾರಲ್ಲಿರುವಂತಹ ಕೆಲವು ಸಂಸ್ಥೆಗಳು, ಮೂಗರ್ಜಿಗಳನ್ನು ಬರೆದು, ಈ ರೀತಿಯ ಸಂದರ್ಭದಲ್ಲಿ ತನಿಖೆ ಮಾಡಿಕೊಂಡು ಬಂದಿರುವಂತದ್ದು, ಆಗಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಮೇಲೂ ಹಲವಾರು ಬಾರಿ ತನಿಖೆಯಾಗಿಲ್ವಾ, ಇದೇ ಜಮೀನಿನ ಮೇಲೆ 25 ವರ್ಷ, 30 ವರ್ಷ ನಮಗೆಷ್ಟು ಕಾಟ ನೀಡಿದ್ದಾರೆಂಬುದು ನಮಗೆ ಮಾತ್ರ ಗೊತ್ತು ಎಂದು ಕಿಡಿಕಾರಿದ್ದಾರೆ.
ರಾಜಕೀಯದಲ್ಲಿ ಇರುವಾಗ ಹಲವಾರು ರೀತಿಯ ರಾಜಕೀಯ ತೊಂದರೆಗಳನ್ನು ನಾವು ಅನುಭವಿಸಲೇ ಬೇಕು. ಆದರೆ ನಾವು ಸರಿಯಾಗಿದ್ದರೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಜಮೀರ್, ಬೇಗ್ ಮನೆಗೆ ಇಡಿ ದಾಳಿ- ಸಿದ್ದರಾಮಯ್ಯನವ್ರೇ ಇದರ ಪಲಾನುಭವಿಯಂತೆ!