ಬೆಳಗಾವಿ: ಎಚ್.ಡಿ ಕುಮಾರಸ್ವಾಮಿ ಅವರೇ 5 ವರ್ಷ ಅವಧಿ ಪೂರ್ಣ ಮಾಡಲಿದ್ದಾರೆ. ಹೊಸ ಸಿಎಂ ಆಗೋ ವಿಚಾರ ಮುಗಿದ ಅಧ್ಯಾಯ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿ ಸಂಪುಟ, ನಿಗಮ ಮಂಡಳಿ ನೇಮಕದ ಬೇಡಿಕೆ ಇಟ್ಟಿದ್ದು, ಕೆಲ ಜಿಲ್ಲೆ, ವರ್ಗಕ್ಕೆ ನ್ಯಾಯ ಸಿಗುವ ನಿರೀಕ್ಷೆಯಿದೆ. ಸರ್ಕಾರ ನಡೆಸುವ ಸಂದರ್ಭದಲ್ಲಿ ಸಮಸ್ಯೆ ಸಹಜ, ಯಾವಾಗ ಬೇಕಾದರೂ ಸಮನ್ವಯ ಸಮಿತಿ ಕರೆಯಲು ಅವಕಾಶವಿದೆ. ಸರ್ಕಾರದ ಅನೇಕ ಆಗುಹೋಗುಗಳನ್ನು ಚರ್ಚಿಸಲು ಸಮನ್ವಯ ಇದೆ. ಎಷ್ಟೇ ಪ್ರಬಲ ಮುಖಂಡರಿದ್ದರೂ ಕೊನೆಗೆ ಪಕ್ಷವೇ ಮುಖ್ಯ. ಎಲ್ಲರೂ ಹೈಕಮಾಂಡ್ ಮಾತು ಕೇಳಬೇಕಾಗುತ್ತದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ದೂರನ್ನು ಆಧಾರಿಸಿ ಸಭೆ ಕರೆದಿಲ್ಲ. ಚುನಾವಣೆ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಯಲಿದೆ. ನಮ್ಮ ಗೊಂದಲವನ್ನು ನಾವೇ ಪರಸ್ಪರ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುತ್ತವೆ. ಇದನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುವ ಅವಶ್ಯಕತೆ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಸಮಸ್ಯೆಗಳನ್ನು ಹೈಕಮಾಂಡ್ ಮುಂದೆ ಹೇಳಿರಬಹುದು. ಆದರೆ ಇದನ್ನು ದೂರು ಎಂದು ಪರಿಗಣಿಸಲು ಅಗತ್ಯವಿಲ್ಲ. ಸ್ಥಳೀಯ ಸಮಸ್ಯೆಗಳಲ್ಲಿ ಪಕ್ಷ ಬರುವುದಿಲ್ಲ ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಪಕ್ಷ, ಹೈಕಮಾಂಡ್ ಗೆ ಯಾರ ಶಕ್ತಿ ಏನು ಎಂಬುದು ಗೊತ್ತಿದೆ. ಎಲ್ಲಾ ನಿರ್ಧಾರವನ್ನ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ವೇಣುಗೋಪಾಲ್ ಕರೆದ ಇಂದಿನ ಸಭೆಗೆ ನಾನು ಹೋಗುತ್ತಿಲ್ಲ. ಇನ್ನೂ ಪಿ ಎಲ್ ಡಿ ಬ್ಯಾಂಕ್‍ಗೆ ಸಂಬಂಧಪಟ್ಟಂತೆ ಚುನಾವಣೆ ಕಾನೂನು ಬದ್ಧವಾಗಿ ನಡೆಯುತ್ತಿದೆ ಮುಂದೆ ಇದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv