ಬೆಂಗಳೂರು: ದೇಶೀಯ ಉಕ್ಕು ಉದ್ಯಮದ ಹಿತರಕ್ಷಣೆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರಕ್ಷಣಾತ್ಮಕ ಕ್ರಮ ಕೈಗೊಂಡಿದೆ. ಉಕ್ಕು ಆಮದಿನ ಮೇಲೆ ಕೇಂದ್ರ 12% ರಷ್ಟು ಸುರಕ್ಷತಾ ಸುಂಕವನ್ನು ವಿಧಿಸಿದೆ. ಈ ಕ್ರಮಕ್ಕಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು (H.D Kumaraswamy) ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಕೃತಜ್ಞತೆ ಸಲ್ಲಿಸಿದ್ದಾರೆ.
ಮಿಶ್ರಲೋಹವಲ್ಲದ ಮತ್ತು ಮಿಶ್ರಲೋಹದ ಉಕ್ಕಿನಿಂದ ತಯಾರಿಸಿದ ಕೆಲವು ಉತ್ಪನ್ನಗಳ ಆಮದಿನ ಮೇಲೆ 12% ರಷ್ಟು ಸುರಕ್ಷತಾ ಸುಂಕ ವಿಧಿಸುವ ನಿರ್ಧಾರವನ್ನು ಕೇಂದ್ರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿ ಕೇಂದ್ರವು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರದ ಈ ಉಪಕ್ರಮವು ದೇಶೀಯ ಉಕ್ಕು ಉದ್ಯಮಕ್ಕೆ ಪ್ರೋತ್ಸಾಹದ ಜೊತೆಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
I welcome the 12% safeguard duty on imported steel flat products. This will protect Indian manufacturers, ensure fair competition, and boost our domestic industry.
Grateful to Hon’ble PM Shri @narendramodi avaru for his continued support towards building a self-reliant India.… pic.twitter.com/3l6YgsjwVz
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) April 21, 2025
ಈ ನಿರ್ಧಾರವನ್ನು ಸಚಿವ ಹೆಚ್‌ಡಿಕೆ ಸ್ವಾಗತಿಸಿದ್ದು, ಆಮದು ಹೆಚ್ಚಳದ ಪ್ರತಿಕೂಲಕರ ಪರಿಣಾಮಗಳಿಂದ ದೇಶೀಯ ಉಕ್ಕು ತಯಾರಕರನ್ನು ರಕ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ನ್ಯಾಯಯುತ ಸ್ಪರ್ಧೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಕ್ರಮವು ಸಕಾಲಿಕ ಮತ್ತು ಅಗತ್ಯ ಕ್ರಮವಾಗಿದೆ. ಈ ಕ್ರಮವು ದೇಶೀಯ ಉತ್ಪಾದಕರಿಗೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉಕ್ಕು ಉದ್ಯಮಗಳಿಗೆ ಅನುಕೂಲವಾಗಿದೆ ಹಾಗೂ ಹೆಚ್ಚುತ್ತಿರುವ ಆಮದುಗಳಿಂದ ಅಪಾರ ಒತ್ತಡವನ್ನು ಎದುರಿಸುತ್ತಿರುವವರಿಗೆ ನಿರ್ಣಾಯಕ ಪರಿಹಾರವನ್ನು ನೀಡುತ್ತದೆ. ಸುರಕ್ಷತಾ ಸುಂಕವು ಮಾರುಕಟ್ಟೆ ಸ್ಥಿರತೆಯನ್ನು ಮಾತು ಸ್ಥಾಪಿಸಲು ಮತ್ತು ದೇಶೀಯ ಉದ್ಯಮದ ವಿಶ್ವಾಸವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮೋದಿಯವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯ ಅಡಿಯಲ್ಲಿ ದೇಶೀಯ ವ್ಯೂಹಾತ್ಮಕ ವಲಯಗಳನ್ನು ಬಲಪಡಿಸುವಲ್ಲಿ ಇದು ಅತ್ಯುತ್ತಮ ಹೆಜ್ಜೆಯಾಗಿದೆ. ಅಲ್ಲದೇ ಈ ನಿಟ್ಟಿನಲ್ಲಿ ಮೋದಿಯವರ ನಿರಂತರ ಬೆಂಬಲಕ್ಕಾಗಿ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತೀಯ ಉಕ್ಕು ವಲಯವು ಸುಸ್ಥಿರ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರುವುದನ್ನು ಖಚಿತಪಡಿಸಿಕೊಳ್ಳಲು ದೇಶೀಯ ವಲಯದಲ್ಲಿ ಸಚಿವಾಲಯವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ನಿರ್ಣಾಯಕ ಹೆಜ್ಜೆಗಳನ್ನು ಇಡುತ್ತದೆ ಎಂದು ಅವರು ತಿಳಿಸಿದ್ದಾರೆ.