ಮೈಸೂರು: ನಾನು ಜೆಡಿಎಸ್ ಬಿಟ್ಟು ಹೋದರೆ ಸಾಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಯುತ್ತಿದ್ದಾರೆ. ನಾನು ಪಕ್ಷ ಬಿಟ್ಟರೆ ಸಾರಾ ಮಹೇಶ್‍ನನ್ನು ಮೈಸೂರಲ್ಲಿ ನಾಯಕನನ್ನಾಗಿ ಬೆಳೆಸಬಹುದು ಎಂಬ ನಿರ್ಧಾರಕ್ಕೆ ಎಚ್‍ಡಿಕೆ ಬಂದಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇಂದು ಮೈಸೂರಿನಲ್ಲಿ ಜೆಡಿಎಸ್‍ನ ಚಿಂತನ ಮಂಥನ ಸಭೆ ನಡೆಯಿತು. ಸಭೆಗೆ ಜಿಟಿಡಿ ಗೈರಾಗಿದ್ದರು. ಇದಕ್ಕೆ ಎಚ್.ಡಿ.ದೇವೇಗೌಡರು ಪ್ರತಿಕ್ರಿಯಿಸಿ, ಜಿಟಿಡಿ ಎಲ್ಲಿಗೆ ಹೋಗಬೇಕೋ ಹೋಗಲಿ ಬಿಡಿ ಅವರನ್ನು ಯಾರು ಹಿಡಿದಿಟ್ಟುಕೊಂಡಿದ್ದಾರೆ ಎಂದಿದ್ದರು.
Advertisement
Advertisement
ಇದಕ್ಕೆ ಪ್ರತಿಯಾಗಿ ಜಿ.ಟಿ.ದೇವೇಗೌಡ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ನಾನು ಪಕ್ಷ ಬಿಟ್ಟು ಹೋಗಲಿ ಎಂಬ ಭಾವನೆ ಅವರಲ್ಲಿ ಇರಬಹುದು. ಆದರೆ ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಅಲ್ಲದೆ, ಚಾಮುಂಡಿ ತಾಯಿ ಅಣೆ ಸಾರಾ ಮಹೇಶ್‍ನನ್ನು ಮಂತ್ರಿ ಮಾಡಿ ಎಂದು ನಾನೇ ಹೇಳಿದ್ದೆ. ಇಂದು ಸಾರಾ ಮಹೇಶ್‍ನನ್ನು ಮಂತ್ರಿ ಮಾಡಬೇಡಿ ಎಂದು ಜಿ.ಟಿ.ದೇವೇಗೌಡ ಹೇಳಿದ್ದರು ಎಂದು ಎಚ್‍ಡಿಕೆ ಸುಳ್ಳು ಹೇಳಿದ್ದಾರೆ. ಕುಮಾರಸ್ವಾಮಿ ಅವರೇ ಸುಳ್ಳು ಹೇಳಬೇಡಿ, ಚಾಮುಂಡಿ ತಾಯಿ ಇದನ್ನು ಕ್ಷಮಿಸುವುದಿಲ್ಲ ಎಂದು ಎಚ್‍ಡಿಕೆಗೆ ತಿರುಗೇಟು ನೀಡಿದರು.
Advertisement
ದೇವೇಗೌಡರು ನನಗೆ ಗುರುವಲ್ಲ ಎಂದು ಎಲ್ಲಿಯೂ ಹೇಳಿಲ್ಲ. ದೇವೇಗೌಡರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನಾನು ಅವರು ಗುರು ಅಲ್ಲ ಎಂದು ಹೇಳಿದ್ದರೆ ಇವತ್ತೇ ರಾಜಕೀಯ ಬಿಡುತ್ತೇನೆ. ಇವತ್ತಿನ ಮೈಸೂರು ಸಭೆಗೆ ನನಗೆ ಆಹ್ವಾನವೇ ನೀಡಿಲ್ಲ. ಆಹ್ವಾನವಿಲ್ಲದೆ ಹೋಗುವುದು ಹೇಗೆ, ಬಹಿರಂಗ ಮಾತಾಡುವುದಾದರೆ ಎಚ್‍ಡಿಕೆ ಎಲ್ಲವನ್ನೂ ಬಹಿರಂಗ ಮಾತಾಡಲಿ. ನಾನು ಎಲ್ಲವನ್ನೂ ಮಾತನಾಡುತ್ತೇನೆ ಎಂದು ಸವಾಲು ಹಾಕಿದರು.
Advertisement
ದಸರಾ ಮಾಡಲು ಬಿಜೆಪಿ ನಾಯಕರ ಜೊತೆ ಸಭೆಗೆ ಹೋಗಿಲ್ಲ. 1995 ರಲ್ಲೆ ದಸರಾ ಮಾಡಿರೋನು ನಾನು, ಈಗ ಏನು ಮಾಡುವುದು ಎಂದು ಎಚ್‍ಡಿಕೆ ವ್ಯಂಗ್ಯ ಮಾಡಿದ್ದಕ್ಕೆ ತಿರುಗೇಟು ನೀಡಿದರು.
ಮೈಸೂರಿನ ಜೆಡಿಎಸ್ ಚಿಂತನ ಮಂಥನ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನನಗೆ ರಾಜಕೀಯ ಗುರುಗಳು ಯಾರೂ ಇಲ್ಲ ಅಂತ ಹೇಳಿದ್ದೇನೆ. ಆದರೆ, ದೇವೇಗೌಡರು ಅಥವಾ ಕುಮಾರಸ್ವಾಮಿ ನನ್ನ ಗುರುಗಳಲ್ಲ ಎಂದು ಹೇಳಿಲ್ಲ. ನಾನು ಸ್ವಂತ ಶಕ್ತಿಯಿಂದ ಬೆಳೆದು ಬಂದವನು. ರಾಜಕೀಯವಾಗಿ ಕುಮಾರಸ್ವಾಮಿ, ಸಾರಾ ಮಹೇಶ್ ನಡೆಸಿಕೊಂಡಿದ್ದು ಸರಿಯಲ್ಲ ಎಂದು ಹೆಚ್‍ಡಿಕೆ ಹಾಗೂ ಸಾರಾ ಮಹೇಶ್ ವಿರುದ್ಧ ಜಿಟಿಡಿ ಆಕ್ರೋಶ ಹೊರಹಾಕಿದ್ದಾರೆ.
ನನಗೆ ಉಸ್ತುವಾರಿ ಸಚಿವ ಸ್ಥಾನ ಕೊಟ್ಟರು. ಯಾವುದೇ ಕೆಲಸ ಆಗಬೇಕಾದರೂ ನಾನು ಸಾರಾ ಮಹೇಶ್‍ಗೆ ಹೇಳಬೇಕು, ಮಹೇಶ್ ಕುಮಾರಸ್ವಾಮಿಗೆ ಹೇಳಬೇಕು. ಅವರು ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಕೊಟ್ಟಿದ್ದು ನಿಭಾಯಿಸಲು ಸಾಧ್ಯವಾಗದೆ ವಾಪಸ್ ಹೋಗುತ್ತಾನೆ ಎಂಬ ಉದ್ದೇಶದಿಂದ. ಈ ವಿಚಾರ ನನಗೆ ಗೊತ್ತಾಗಿಯೇ ನಾನು ಉನ್ನತ ಶಿಕ್ಷಣ ಸಚಿವ ಸ್ಥಾನ ನಿಭಾಯಿಸಿದೆ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ನಾನು ಸಿದ್ದರಾಮಯ್ಯ ರಾಜಕೀಯ ವಿರೋಧಿಗಳಾಗಿದ್ದೆವು. ಆದರೆ, ಎಂದೂ ನಾನು ಸಿದ್ದರಾಮಯ್ಯ ಮನೆಯವರನ್ನು ದ್ವೇಷ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.