ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಕೀರ್ತಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರಿಗೆ ಹೋಗಬೇಕು. ಅವರು ನಡೆಸಿದ ಆಡಳಿತದಿಂದ ಬೇಸತ್ತು ರಾಜೀನಾಮೆ ಕೊಟ್ಟು ಕೆಲ ಶಾಸಕರು ಬಿಜೆಪಿಗೆ ಬಂದು ಗೆದ್ದಿದ್ದಾರೆ. ಅವರ ಸಹಕಾರದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರವಾಗಿದೆ ಎಂದು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಬ್ಯಾಂಕ್ ಉದ್ಘಾಟಿಸಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, ನಾಳೆ ಅಥವಾ ನಾಡಿದ್ದು ಮುಖ್ಯಮಂತ್ರಿಗಳು ಪಕ್ಷದ ರಾಷ್ಟ್ರ ನಾಯಕರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯ ದಿನಾಂಕ ನಿಗದಿ ಮಾಡಲಿದ್ದಾರೆ. ಸಂಪುಟ ವಿಸ್ತರಣೆ ಮಾಡುವ ಮುಖಾಂತರ ಸರ್ಕಾರ ಉತ್ತಮ ಆಡಳಿತ ಕೊಡುತ್ತೆ ಎನ್ನುವ ವಿಶ್ವಾಸವಿದೆ ಎಂದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಎಂಎಲ್‍ಸಿ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಮುಖಂಡರು ಮತ್ತು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಹೆಚ್ಚು ಹೇಳಲು ಆಗಲ್ಲ ಎಂದು ಹೇಳಿದರು.