Bengaluru CityKarnatakaLatestMain Post

ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ

ಬೆಂಗಳೂರು: ಬೆಲೆ ಏರಿಕೆ ನಿರಂತರ ಪ್ರಕ್ರಿಯೆ, ಯಾವುದೇ ಸರ್ಕಾರ ಇದ್ದರೂ ಬೆಲೆ ಏರಿಕೆ ಅನಿವಾರ್ಯ. ಸರ್ಕಾರ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಬೆಲೆ ಏರಿಕೆ ಮಾಡಲೇಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಈ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ ನಿರಂತರ ಪ್ರಕ್ರಿಯೆ, ಸರ್ಕಾರದ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು, ಹಣ ಹೊಂದಿಸಲಿಕ್ಕೆ ಕೆಲವು ಸಂದರ್ಭಗಳಲ್ಲಿ ಬೆಲೆ ಏರಿಕೆ ಮಾಡುವ ಅನಿವಾರ್ಯ ಸಂದರ್ಭಗಳು ಬರುವುದು ಸಹಜ. ಸರ್ಕಾರ ಬೆಲೆ ಏರಿಕೆ ಮಾಡಿದಾಗ ವಿರೋಧ ಪಕ್ಷಗಳು ಹೋರಾಟ, ಪ್ರತಿಭಟನೆ ಮಾಡುವುದು ಸಹ ನಿರಂತರ ಪ್ರಕ್ರಿಯೆ. ಹಲವು ದಿನಗಳಿಂದ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ, ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಗಮನ ಸೆಳೆದಿದ್ದಾರೆ ಎಂದರು.

ಒಂದು ವರ್ಗದ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲ್ಲ, ಆದರೆ ಚಿಕ್ಕ ಪುಟ್ಟ ಕೆಲಸ ಮಾಡೋರಿಗೆ ಬದುಕು ಕಷ್ಟ ಆಗುತ್ತೆ. ಉತ್ತರ ಕರ್ನಾಟಕ ಪ್ರವಾಹದ ವೇಳೆ ಬೆಳೆ ಹಾನಿ, ಮೂಲಭೂತ ಸೌಲಭ್ಯಗಳು ನಷ್ಟ ಆಯಿತು. ಇದನ್ನೆಲ್ಲ ಸರಿಪಡಿಸುವ ಹೊಣೆ ಸರ್ಕಾರದ ಮೇಲೆ ಬಿತ್ತು. ಇದರ ಮಧ್ಯೆ ಕೊರೊನಾ ಹಾಗೂ ಲಾಕ್‍ಡೌನ್ ತೀವ್ರ ನಷ್ಟವಾಯಿತು. ಕೊರೊನಾ ಲೋಪದೋಷಗಳ ಬಗ್ಗೆ ಮಾತಾಡಲ್ಲ. ಜನರ ಬದುಕು ಸರಿಪಡಿಸುವುದು ಮುಖ್ಯ ಎಂದು ತಿಳಿಸಿದರು. ಇದನ್ನೂ ಓದಿ:  ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ : ಸಾ.ರಾ ಮಹೇಶ್

ಬೆಲೆ ಏರಿಕೆ ನೆಪದಲ್ಲಿ ರಾಜಕೀಯ ಸರಿಯಲ್ಲ, ಜನರ ಬದುಕಿಗೆ ಬೆಲೆ ಏರಿಕೆ ಹೊರೆಯಾಗಿದೆ. ತೆರಿಗೆ ರೂಪದಲ್ಲಿ ಬರುತ್ತಿರುವ ಹಣ ಬಳಕೆ ಮಾಡಿಕೊಳ್ಳೋದು ಮುಖ್ಯ. ಬಡ ವರ್ಗದ ಜನರ ಮನೆಗೆ ಬೆಂಕಿ ಬಿದ್ದಿದೆ. ಅವರ ಬದುಕು ಕಷ್ಟದಲ್ಲಿದೆ, ಉರಿಯುವ ಮನೆಯಲ್ಲಿ ಗಳ ಹಿರಿಯುವುದು ಸರಿಯೇ? ಅಂತಹ ವರ್ಗದ ಜನರ ಮೇಲೆ ತೆರಿಗೆ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.

ಪ್ರತಿ ವರ್ಷ ಬಡವರು ವಿವಿಧ ರೂಪದಲ್ಲಿ ಒಂದು ಲಕ್ಷ ತೆರಿಗೆ ಕಟ್ಟುತ್ತಾರೆ. ಸಿದ್ದರಾಮಯ್ಯ ಇದೇ ವಿಚಾರವಾಗಿ ಮಾತನಾಡಿದ್ದಾರೆ. ಅಂತಹ ಬಡವರ ಬದುಕು ಕಟ್ಟಿ ಕೊಡಬೇಕು. ಇದು ಸರ್ಕಾರದ ಮುಖ್ಯ ಆದ್ಯತೆ ಆಗಬೇಕು. ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ಖರ್ಚು ಮಾಡುತ್ತೀರಿ, ಆ ಯೋಜನೆಗಳನ್ನು ಸದ್ಯಕ್ಕೆ ಬದಿಗಿಡಿ, ಬಡವರ ಬದುಕು ಕಟ್ಟಿ ಕೊಡುವ ಕೆಲಸಮಾಡಿ. ಸದನದಲ್ಲಿ ಒಂದು ತೀರ್ಮಾನ ಮಾಡಿ, ಬೆಲೆ ಏರಿಕೆ ಮೂಲಕ ಬಡವರ ಜೇಬಿಗೇ ಕೈ ಹಾಕಿದ್ದೀರಿ, ಇದನ್ನು ತಡೆಯಲು ಒಂದು ನಿರ್ಧಾರ ಸದನದಲ್ಲಿ ಆಗಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು. ಇದನ್ನೂ ಓದಿ: ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ಅರ್ಜಿ

ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿದೆ, ಜನ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ಸುರಿಯುತ್ತಿದ್ದಾರೆ. ಜನರ ಮೇಲೆ ಹೊರೆ ಹೆಚ್ಚಾಗಿದೆ, ಇದನ್ನು ಸರಿಪಡಿಸುವುದರತ್ತ ನಾವು ಗಮನ ಕೊಡಬೇಕು. ಫುಡ್ ಡೆಲಿವರಿ ಬಾಯ್, ಓಲಾ ಊಬರ್ ಚಾಲಕರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.

ಅಮೃತ ಯೋಜನೆ ಮುಂದಕ್ಕೆ ಹಾಕಿ, ರಾಜ್ಯದಲ್ಲಿ ಕಡುಬಡವರಿಗೆ ಎರಡು ಹೊತ್ತು ಊಟಕ್ಕೆ ಗತಿ ಇಲ್ಲದಂತಾಗಿದೆ. ತೆರಿಗೆ ಸಂಗ್ರಹದಿಂದ ಬಂದ ಆದಾಯದಲ್ಲಿ ಬಡವರ ಹೊಸ ಬದುಕು ಕಟ್ಟಲು ಆದ್ಯತೆ ನೀಡಿ, ಖಾಸಗಿ ಶಾಲೆಗಳಲ್ಲಿ 17,000 ವಾಹನಗಳ ಚಾಲಕರಿದ್ದಾರೆ. ಅವರಿಗೆ ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಇಲ್ಲ, ಸಂಬಳ ಇಲ್ಲ, ಬ್ಯಾಂಕ್ ಕಾಟದಿಂದ ಊಟಕ್ಕೆ ಏನು ಮಾಡಬೇಕು ಅವರು? ಇಂತಹ ಸಂಕಷ್ಟದಲ್ಲಿ ಇರುವ ವರ್ಗಕ್ಕೆ ಏನು ಮಾಡಬೇಕು ಎಂದು ಸದನದಲ್ಲಿ ತೀರ್ಮಾನ ಮಾಡಿ ಎಂದು ಸಲಹೆ ನೀಡಬೇಕು.

ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿಗಳು, ಮಾಲ್ ಸಿಬ್ಬಂದಿ, ಥಿಯೇಟರ್ ಮುಚ್ಚಿವೆ, ಲಕ್ಷಾಂತರ ಕುಟುಂಬಗಳ ಬದುಕು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಜನರ ಬದುಕು ಸರಿಪಡಿಸಿ, ಅಮೃತ ಯೋಜನೆ ನಿಲ್ಲಿಸಿ, ಈ ವರ್ಷ ಕೋವಿಡ್ ವರ್ಷ ಎಂದು ಘೋಷಿಸಿ, ಜನರ ಬದುಕು ಸರಿಪಡಿಸುವ ಕೆಲಸ ಮಾಡಿ. ಪಕ್ಕದ ರಾಜ್ಯಗಳನ್ನು ಮಾದರಿಯಾಗಿ ತಗೋಬೇಡಿ, ತಮಿಳುನಾಡು 3 ರೂ. ಸೆಸ್ ಕಡಿಮೆ ಮಾಡಿರಬಹುದು, ನಮ್ಮ ರಾಜ್ಯ ಬೇರೆ ರಾಜ್ಯಗಳಿಗೆ ಮಾದರಿ ಆಗಬೇಕು, ಶಾಶ್ವತ ಪರಿಹಾರ ಹುಡುಕಿ ಎಂದು ಆಗ್ರಹಿಸಿದರು.

2002ರಲ್ಲಿ ಎನ್‍ಡಿಎ ಸರ್ಕಾರ ಇದ್ದಾಗ ಆಯಿಲ್ ಬಾಂಡ್ ಆರಂಭ ಆಯಿತು. ನಂತರ ನಿರಂತರವಾಗಿ ನಡೆದುಕೊಂಡು ಬಂತು. ಪ್ರಧಾನಿ ಮೋದಿಯವರು ಮುಂದಿನ ಮಾರ್ಚ್ ವರೆಗೆ 20 ಸಾವಿರ ಕೋಟಿ ಕಟ್ಟಬೇಕು. ಇಲ್ಲಿಯವರೆಗೆ ಆಯಿಲ್ ಬಾಂಡ್ 80 ಸಾವಿರ ಕೋಟಿ ಬಡ್ಡಿ ಕಟ್ಟಿದ್ದಾರೆ. ಆದರೆ ಕಾರ್ಪೊರೇಟ್ ಕಂಪನಿಗಳಿಗೆ ಶೇ.27ರಷ್ಟು ತೆರಿಗೆ ವಿನಾಯಿತಿ ನೀಡಿದರು ಅಂತಾರೆ, ಇನ್ನು ಕೆಲವರು ಶೇ.40ರಷ್ಟು ತೆರಿಗೆ ವಿನಾಯಿತಿ ಕೊಟ್ಟರು ಅಂತಾರೆ. ಕಾರ್ಪೊರೇಟ್ ಸಂಸ್ಥೆಗಳಿಗೆ 1 ಲಕ್ಷ ಕೋಟಿ ಲಾಭ ಕೊಟ್ಟಿದ್ದಾರೆ ಮೋದಿ, ಯಾರು ಅವರಿಗೆ ಈ ಸಲಹೆ ಕೊಟ್ಟರೋ ಗೊತ್ತಿಲ್ಲ. ಆದರೆ ಇನ್ನೊಂದು ಕಡೆ ಬಡವರಿಂದ 3.9 ಲಕ್ಷ ಕೋಟಿ ತೆರಿಗೆ ವಸೂಲಾಗಿದೆ. ಜನ ತಮ್ಮ ಆದಾಯದ ಶೇ.45ರಷ್ಟು ಚಿನ್ನ, ಮನೆ, ಸೈಟ್ ಕೊಳ್ಳಲು, ಮದುವೆಗೆ ಉಳಿಸಿರುತ್ತಾರೆ. ಆದರೆ ಕೋವಿಡ್ ಬಂದಮೇಲೆ ಈ ಉಳಿಕೆ ಹಣವನ್ನು ಆಸ್ಪತ್ರೆಗೆ ಸುರಿದಿದ್ದಾರೆ ಎಂದರು.

Leave a Reply

Your email address will not be published. Required fields are marked *

Back to top button