DistrictsHassanKarnatakaLatestMain Post

ಸರ್ಕಾರ ಕೂಡಲೇ ಶಾಲೆ, ಕಾಲೇಜುಗಳಿಗೆ 15-20 ದಿನ ರಜೆ ಘೋಷಿಸಬೇಕು: ಹೆಚ್‍ಡಿಕೆ

- ಮಕ್ಕಳಲ್ಲಿ ಸೋಂಕು ಹೆಚ್ಚುತ್ತಿದ್ದರೂ ಸರ್ಕಾರದ ಉಪೇಕ್ಷೆ ಸರಿಯಲ್ಲ

– ವೀಕೆಂಡ್ ಕರ್ಫ್ಯೂ ಬಗ್ಗೆ ಬಿಜೆಪಿ ನಾಯಕರಲ್ಲಿ ಗೊಂದಲ ನಿಂತಿಲ್ಲ

ಹಾಸನ: ‘ಶಾಲೆ, ಕಾಲೇಜು ಹಾಗೂ ಹಾಸ್ಟೆಲ್’ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬರುತ್ತಿದ್ದು, ಸರ್ಕಾರ ಕೂಡಲೇ ಶಾಲಾ-ಕಾಲೇಜುಗಳಿಗೆ ಕೊನೆಪಕ್ಷ 15 ರಿಂದ 20 ದಿನ ರಜೆ ಘೋಷಣೆ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

ಚನ್ನಪಟ್ಟಣದ ಹೊಂಗನೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸೋಂಕಿತರಾಗಿದ್ದಾರೆ. ಹೀಗಾಗಿ ಇಂಥ ಶಾಲೆಗಳನ್ನು ತಕ್ಷಣವೇ ಬಂದ್ ಮಾಡಿಸಬೇಕು ಎಂದರು. ಇದನ್ನೂ ಓದಿ:  ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

ತಜ್ಞರಲ್ಲಿ ಕೆಲವರು ಶಾಲೆಗಳನ್ನು ತೆರೆಯುವಂತೆ ಘೋಷಿಸುವುದಕ್ಕೆ ಪರ-ವಿರೋಧ ಇದೆ ಎಂಬುದರ ಕುರಿತು ಮಾತನಾಡಿದ ಅವರು, ತಜ್ಞರು ಪರ ಅಥವಾ ವಿರೋಧ ಎನ್ನುವ ಮಾತು ಬೇರೆ. ಆದರೆ, ಸರ್ಕಾರದ ಮುಂದೆ ಕೋವಿಡ್ ಸ್ಥಿತಿಗತಿಗಳ ಬಗ್ಗೆ ವಾಸ್ತವಾಂಶಗಳಿವೆ. ಆ ಮಾಹಿತಿಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಮೊನ್ನೆಯಷ್ಟೇ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ 163 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತುಮಕೂರಿನಲ್ಲಿ ಒಂದೇ ಕಾಲೇಜಿನ 600 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಈ ಎಲ್ಲ ಅಂಕಿ ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ ಎಂದು ವಿವರಿಸಿದರು.

ತಜ್ಞರ ವರದಿಗಿಂತ ಸರ್ಕಾರದ ಜವಾಬ್ದಾರಿ ಹೆಚ್ಚು. ಸರ್ಕಾರವು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡಲಿ. ಮಕ್ಕಳು, ಪೋಷಕರು ಆತಂಕಕ್ಕೆ ಒಳಗಾಗುವುದಕ್ಕೆ ಅವಕಾಶ ನೀಡಬಾರದು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಸಲಿ ಎಂದು ಸಲಹೆ ಮಾಡಿದರು.

ಬಿಜೆಪಿ ನಾಯಕರಲ್ಲೇ ಗೊಂದಲವಿದೆ!
ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ಎಲ್ಲ ಕಡೆ ಗೊಂದಲವಿದೆ. ಅದರಲ್ಲೂ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಮೊದಲು ಇದನ್ನು ಅವರು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ವೀಕೆಂಡ್ ಕರ್ಫ್ಯೂನಿಂದ ಅವರಿಗೆ ಜೀವನ ನಿರ್ವಹಣೆ ಕಷ್ಟ. ದಿನನಿತ್ಯದ ಆದಾಯದಲ್ಲಿ ಕುಟುಂಬ ನಿರ್ವಹಿಸಬೇಕಿದೆ. ಇಂತಹ ಕುಟುಂಬಗಳ ಬದುಕು ಕಟ್ಟಿ ಕೊಡಬೇಕು. ಬದುಕು ಕಟ್ಟಿ ಕೊಡುವ ಜವಾಬ್ದಾರಿ ಸರ್ಕಾರದ್ದು. ವಿರೋಧ ಪಕ್ಷದವರು ಸುಲಭವಾಗಿ ಹೇಳುತ್ತಾರೆ ಅಂತಾರೆ ಅಂತ ಲಘುವಾಗಿ ಮಾತನಾಡುವುದು ಬೇಡ ಎಂದರು.

ನಾವು ಸರ್ಕಾರ ನಡೆಸಿದ್ದೇವೆ. ಆ ಕಷ್ಟ ನಷ್ಟ ನನಗೂ ಗೊತ್ತಿದೆ. ಪ್ರತಿಯೊಬ್ಬ ನಾಗರಿಕರ ಹಿತ ಕಾಪಾಡೋದು ಸರ್ಕಾರದ ಜವಾಬ್ದಾರಿ. ಜನರ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋದು ಸರ್ಕಾರದ ಕರ್ತವ್ಯ. ನಾನು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಹೀಗೆ ಹೇಳುತ್ತಿಲ್ಲ. ನಾಡಿನ ಜನರು ನೀಡುವ ತೆರಿಗೆ ಹಣವನ್ನೇ ಬಳಸಿ ಬಡ ವರ್ಗದ ಜನರ ನೆರವಿಗೆ ಸರ್ಕಾರ ಧಾವಿಸಲಿ ಎಂದು ಹೇಳಿದರು.

ರಾಮನಗರದಲ್ಲಿ ಹೆಚ್ಚಿದ ಸೋಂಕು!
ರಾಮನಗರದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಇದು ಕಾಂಗ್ರೆಸ್ ಪಾದಯಾತ್ರೆಯಿಂದ ಹೆಚ್ಚಾಯಿತೋ ಅಥವಾ ಬೇರೆ ಯಾವುದೇ ಕಾರಣದಿಂದ ಹೆಚ್ಚಾಯಿತೋ ಎಂದು ನಾನು ಚರ್ಚೆ ಮಾಡಲ್ಲ. ಜಿಲ್ಲೆಯ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.

ಚನ್ನಪಟ್ಟಣದ ಸಮಗ್ರ ಅಭಿವೃದ್ಧಿ
ಚನ್ನಪಟ್ಟಣ ಸಮಗ್ರ ಅಭಿವೃದ್ಧಿಗೆ ನನ್ನ ಎಲ್ಲ ಶ್ರಮ ಹಾಕುತ್ತಿದ್ದೇನೆ. ಇಲ್ಲಿಯವರೆಗೆ ಕೆರೆ ತುಂಬಿಸುವ ಕೆಲಸ ಆಯಿತು. ಈಗ ಸೇತುವೆ ಬೇಕು ಎಂಬ ಸಮಸ್ಯೆ ಶುರುವಾಗಿದೆ. ನಾನು ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ಮಾಡಿದ್ದೇನೆ. ನಾನು ಮೂರುವರೆ ವರ್ಷದಲ್ಲಿ ಏನು ಮಾಡಿದ್ದೇನೆ. 25 ವರ್ಷದಿಂದ ಬೇರೆಯವರು ಏನು ಮಾಡಿದ್ದಾರೆ ಎನ್ನುವುದನ್ನು ಜನ ಗಮನಿಸಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

ಕಳೆದ ಮೂರೂವರೆ ವರ್ಷದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಕ್ಷೇತ್ರದ ಜನರಿಗೆ ನನ್ನ ಅಭಿವೃದ್ಧಿ ಕಾರ್ಯ ತಿಳಿದಿದೆ. ಕೆಲವರು ಚಿಲ್ಲರೆ ರಾಜಕಾರಣ ಮಾಡೋದನ್ನ ಬಿಡಬೇಕು. ಜನರನ್ನು ತಪ್ಪು ದಾರಿಗೆಳೆಯಬೇಡಿ. ಇಷ್ಟೆಲ್ಲಾ ಕೆಲಸಗಳು ವ್ಯರ್ಥವಾಗುತ್ತದೆ ಎಂದು ಟಾಂಗ್ ಕೊಟ್ಟರು.

Leave a Reply

Your email address will not be published.

Back to top button