-ಜನ ಪ್ರೀತಿ ತೋರಿಸಿ ನಿಖಿಲ್ ಸೋಲಿಸಿದ್ರು ಎಂದ ಕುಮಾರಸ್ವಾಮಿ
ರಾಮನಗರ: ರಾಜ್ಯದಲ್ಲಿ ಚುನಾವಣಾ (Elections) ಕಾವು ದಿನೇ ದಿನೇ ರಂಗೇರುತ್ತಿದೆ. ಮೂರು ಪಕ್ಷಗಳೂ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಈ ನಡುವೆ ಸ್ವಕ್ಷೇತ್ರದಲ್ಲಿ ಮಗನ ಗೆಲುವಿಗಾಗಿ ಪಣ ತೊಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಭರ್ಜರಿ ಬಾಡೂಟ (Nonveg) ಹಾಕಿಸುವ ಮೂಲಕ ಮತದಾರರನ್ನ ಸೆಳೆಯುವುದಕ್ಕೆ ಮುಂದಾಗಿದ್ದಾರೆ.
ಮಂಡ್ಯಕ್ಕೆ (Mandya) ಮೋದಿ ಆಗಮನದಿನದಂದೇ ರಾಮನಗರ (Ramanagara) ಕ್ಷೇತ್ರದಲ್ಲಿ ಹೆಚ್‌ಡಿಕೆ ಬಾಡೂಟ ಹಾಕಿಸುವ ಮೂಲಕ ಬಿಜೆಪಿಗೆ (BJP) ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್
ಹೌದು, 2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಹಳೇ ಮೈಸೂರು ಭಾಗದಲ್ಲಿ ಮೂರು ಪಕ್ಷಗಳು ಕೂಡಾ ಜಿದ್ದಾ-ಜಿದ್ದಿಯಲ್ಲಿ ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನ ಆಯೋಜನೆ ಮಾಡುವ ಮೂಲಕ ಮತದಾರರ ಮನವೊಲಿಸಲು ಮುಂದಾಗಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪ್ರಧಾನಿ ಮೋದಿ (Narendra Modi) ರೋಡ್ ಶೋ ಮಾಡ್ತಿದ್ರೆ, ಮತ್ತೊಂದೆಡೆ ಪಕ್ಕದ ಜಿಲ್ಲೆ ರಾಮನಗರದಲ್ಲಿ ಹೆಚ್‌ಡಿಕೆ ಭರ್ಜರಿ ಬಾಡೂಟ ಆಯೋಜಿಸಿದ್ದಾರೆ. ಪುತ್ರನ ಗೆಲುವಿಗಾಗಿ ರಣತಂತ್ರ ರೂಪಿಸಿರೋ ಕುಮಾರಸ್ವಾಮಿ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ರಾಮನಗರ ಜಿಲ್ಲೆಯ 5ನೇ ತಾಲೂಕಾಗಿ ಹಾರೋಹಳ್ಳಿ ಉದ್ಘಾಟಿಸಿದ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಇದನ್ನೇ ಸದುಪಯೋಗಪಡಿಸಿಕೊಂಡ ಕುಮಾರಸ್ವಾಮಿ ಕ್ಷೇತ್ರದ ಸುಮಾರು 25 ಸಾವಿರ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಿದ್ದರು. ಬಾಡೂಟದಲ್ಲಿ ಮಟನ್ ಸಾಂಬಾರ್, ಚಿಕನ್ ಫ್ರೈ, ಬೋಟಿ ಗೊಜ್ಜು, ತಲೆ ಮಾಂಸ, ಊಟ ಹಾಕಿಸಿದ್ದು ಬಂದಂತಹ ಕಾರ್ಯಕರ್ತರು ಬಾಡೂಟಕ್ಕೆ ಮುಗಿಬಿದ್ದರು. ಇದನ್ನೂ ಓದಿ: ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಬೇಗ ತಲುಪಿ!
ಇದೇ ವೇಳೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಹೆಚ್‌ಡಿಕೆ, ನನ್ನ ತಾಲೂಕಿನ ಜನತೆ ಮೇಲೆ ವಿಶ್ವಾಸವಿದೆ. ಕಳೆದ ಬಾರಿ ಮಂಡ್ಯದಲ್ಲಿ ಜನ ನಿಖಿಲ್ ಮೇಲೆ ಪ್ರೀತಿ ತೋರಿಸಿದ್ದರು, ಆದ್ರೆ ಸೋಲಿಸಿದರು. ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘದ ಕುತಂತ್ರದಿಂದ ನಿಖಿಲ್ ಸೋತರು. ಈಗ ನಿಖಿಲ್‌ಗೆ ಆ ಭಯ ಬೇಡ. ರಾಮನಗರದ ಜನ ನಿಖಿಲ್‌ರನ್ನ ಗೆಲ್ಲಿಸುತ್ತಾರೆ ಎಂದು ನಿಖಿಲ್‌ಗೆ ಅಭಯ ನೀಡಿದರು.
ನಾನು ಜನ್ಮ ತಾಳಿದ್ದು ಹಾಸನ ಇರಬಹುದು, ಆದರೆ ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ. ಕುಮಾರಸ್ವಾಮಿ ಯಾರೆಂದು ಗುರುತಿಸುವ ಶಕ್ತಿ ಕೊಟ್ಟಿದ್ದು ರಾಮನಗರದ ಜನ. ನಾನೂ ಕೂಡ ಇಲ್ಲೇ ಮಣ್ಣಾಗೋದು ಎಂದು ಭಾವುಕರಾದರು.