ನವದೆಹಲಿ: ಮಂಡ್ಯಕ್ಕೆ (Mandya) ನಾನು ಕೊಟ್ಟಿದ್ದನ್ನು ಪಟ್ಟಿ ಮಾಡಿ ಹೇಳುತ್ತೇನೆ, ಮೊದಲು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಈಗ ಏನೇನು ಕೊಟ್ಟಿದ್ದೀರಿ ಎಂಬುದನ್ನು ನೀವು ಹೇಳಿ ಎಂದು ಸಿದ್ದರಾಮಯ್ಯಗೆ (Siddaramaiah) ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದ್ದಾರೆ.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯಕ್ಕೆ ನಾನು ಕೊಟ್ಟಿದ್ದನ್ನು ಹೇಳುತ್ತೇನೆ. ಸಿದ್ದರಾಮಯ್ಯನವರೇ ನೀವು ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ಹಿಂದಿನ ಐದು ವರ್ಷದ ಆಡಳಿತದಲ್ಲಿ 200ಕ್ಕೂ ಹೆಚ್ಚು ರೈತರು ಮಂಡ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಮ್ಮ ಕೊಡುಗೆ. ಅಂತಹ ಕಷ್ಟಕಾಲದಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಅದೇ ಜಿಲ್ಲೆಯ ರೈತರ 900 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಇದಕ್ಕಿಂತ ಕೊಡುಗೆ ಬೇಕಾ? ನಿಮ್ಮ ಕಾಲದಲ್ಲಿ ರೈತರ ಜೀವ ಹೋಯಿತು, ನನ್ನ ಕಾಲದಲ್ಲಿ ಜೀವ ಉಳಿಯಿತು. ಇದು ನಿಮಗೆ ಗೊತ್ತಿರಲಿ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸಿಎಂ ಹಾದಿಯಾಗಿ 224 ಜನ ಎಂಎಲ್‌ಎ ಅನರ್ಹವಾಗೋದು ಖಚಿತ – ವಕೀಲ ದೇವರಾಜೇಗೌಡ ಬಾಂಬ್
ರಾಜ್ಯದಲ್ಲಿ ರೈತರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡಿ. ಪ್ರವಾಹ, ಮಳೆಯಿಂದಾಗಿ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ, ನೀವು ಮೋಜು ಮಸ್ತಿ ಮಾಡುತ್ತಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆಗಾರರ ಪರಿಸ್ಥಿತಿ ಏನಾಗಿದೆ? ತೊಗರಿ ದರ ಕುಸಿದಿದೆ. ಅದಕ್ಕೆ ಏನು ಮಾಡಿದ್ದೀರಿ? ಈವರೆಗೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಸರಿಯಾದ ಸಮಯದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಬರಬೇಕಿತ್ತು, ಬಂದಿಲ್ಲ ಯಾಕೆ? ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಶೀಲನಾ ತಂಡ ಕಳುಹಿಸಿ ಎನ್ನುತ್ತಾರೆ. ನಾಲ್ಕು ತಿಂಗಳ ಬಳಿಕ ಇವರಿಗೆ ಜ್ಞಾನೋದಯ ಆಗಿದೆ. ಈಗ ಕೇಂದ್ರ ತಂಡ ರಾಜ್ಯಕ್ಕೆ ಬಂದರೆ ಏನು ವರದಿ ಕೊಡುತ್ತಾರೆ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ನೀರಿನ ಹೆಜ್ಜೆ: ಅದು ಕಟ್ ಅಂಡ್ ಪೇಸ್ಟ್!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ `ನೀರಿನ ಹೆಜ್ಜೆ’ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೋ ಬರೆದಿರುವ ಆ ಪುಸ್ತಕ ಕೇವಲ ಕಟ್ ಅಂಡ್ ಪೇಸ್ಟ್ ಅಷ್ಟೇ. ಬೇರೆ ಯಾವುದೋ ಪುಸ್ತಕದಲ್ಲಿ ಬರೆದಿರುವುದನ್ನೇ ಕತ್ತರಿಸಿ ಈ ಪುಸ್ತಕದಲ್ಲಿ ಅಂಟಿಸಿದ್ದಾರೆ. ನನಗೆ ಈ ಪುಸ್ತಕವನ್ನು ಯಾರೋ ತಂದುಕೊಟ್ಟರು. ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಅದನ್ನು ಆಸಕ್ತಿಯಿಂದ ಓದುತ್ತೇನೆ. ಆದರೆ, ಈ ಪುಸ್ತಕ ನೋಡಿದಾಗ ಇಲ್ಲಿರುವುದು ಅವರ ಹೆಜ್ಜೆಗಳಲ್ಲ, ಯಾರದೋ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಎಂದು ತೋರಿಸುವ ಕಸರತ್ತು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮೇಕೆದಾಟು: ತಮಿಳುನಾಡು ಜೊತೆ ಮಾತಾಡಲಿ:
ಮೇಕೆದಾಟು ಯೋಜನೆ ಬಗ್ಗೆ ಜನರನ್ನು ಯಾಮಾರಿಸುವುದಕ್ಕೆ ನಮ್ಮ ನೀರು-ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದರು. ಮೇಕೆದಾಟು ಮಾತ್ರ ಇದ್ದಲ್ಲಿಯೇ ಇದೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವವರು, ಇವರು ರಾಜಕೀಯ ಪಾರ್ಟನರ್‌ಗಳೇ ಆಗಿದ್ದಾರೆ. ಇವರು ಹೋಗಿ ಕುಳಿತು ಮಾತನಾಡಬೇಲ್ಲವೇ? ಎಂದಿದ್ದಾರೆ.
ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರ್ಕಾರದ ಅಧಿಕಾರ ಮಾತ್ರವಲ್ಲ, ರಾಜ್ಯ ಸರ್ಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ? ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷಗಳು ಮೀರಿದೆ. ಅದರಲ್ಲಿ 50 ವರ್ಷಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದೆ. ಆಗ ಮೇಕೆದಾಟು ಬಗ್ಗೆ ಏನು ಮಾಡಿದಿರಿ ಎಂದು ಜನರಿಗೆ ಹೇಳಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಮಾತೆತ್ತಿದರೆ ರಾಜ್ಯಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರ ಮಾಡುತ್ತಿರುವುದೇನು? ನಾನು ಕೇಂದ್ರ ಸಚಿವನಾದ ಕೂಡಲೇ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕುದುರೆಮುಖ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ದೇವದಾರಿ ಗಣಿ ಯೋಜನೆಗೆ ಹಣಕಾಸು ಖಾತರಿ ನೀಡುವ ಕಡತಕ್ಕೆ ಸಹಿ ಹಾಕಿದೆ. ಮರುದಿನದಿಂದಲೇ ಅದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಯಿತು. ಈಗ ಅವರ ಪಕ್ಷದ ಜನಪ್ರತಿನಿಧಿ ಒಬ್ಬರು ಬಳ್ಳಾರಿಯಲ್ಲಿ ದಿನನಿತ್ಯ ಪ್ರತಿಭಟನೆ ಮಾಡಿಸುವ, ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಗೆ ವೈಯಕ್ತಿಕವಾಗಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದಿಂದ ಲಾಭವಾಗುವ ಕೆಲಸ ಆಗಲಿಲ್ಲ ಎಂದು ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಸಹಕಾರ ಪಡೆಯುವುದು, ಕೊಡುವುದು ಎಂದರೆ ಹೀಗೇನಾ? ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಗಳಲೆ ರೋಗದಿಂದ ಕೃಷ್ಣಮೃಗಗಳು ಸಾವು: ಈಶ್ವರ ಖಂಡ್ರೆ

