– ಕೆಲ ರಾಜಕೀಯ ಪಕ್ಷ ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ
ಮಂಗಳೂರು: ದೇಶದಲ್ಲಿ ಪೌರತ್ವ ಕಾಯ್ದೆ ಮತ್ತು ಎನ್ಆರ್‌ಸಿ ಕಾಯ್ದೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಇದಕ್ಕೆ ಕೆಲ ರಾಜಕೀಯ ಪಕ್ಷಗಳು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದುತ್ವ ಅಂತ ಭಾಷಣ ಬಿಗಿಯೋ ನಾಯಕರು ಮಾನವೀಯತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪರಿಷತ್ ಸದಸ್ಯ ಫಾರೂಕ್, ಭೋಜೆಗೌಡ, ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಕರ್ನಾಟಕ ಅತ್ಯಂತ ಶಾಂತಿಪ್ರಿಯ ರಾಜ್ಯ. ಕುವೆಂಪು ಅವರ ಶಾಂತಿಯ ಹಾಡಿನಂತೆ ರಾಜ್ಯದಲ್ಲಿ ಶಾಂತಿ ಇದೆ. ಆದರೆ ಕೇಂದ್ರದ ಕಾಯ್ದೆಗೆ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಕಾಯ್ದೆ ಪಾಸ್ ಆದ ಮೇಲೆ ಮೊದಲು ಕಲಬುರಗಿಯಲ್ಲಿ ಪ್ರತಿಭಟನೆ ನಡಿಯಿತು. ಅವತ್ತು ಯಾವುದೇ ಅಹಿತಕರ ಘಟನೆ ಆಗಿಲ್ಲ. ಆದರೆ ಮಂಗಳೂರಿನಲ್ಲಿ ಮಾತ್ರ ಯಾಕೆ ಹೀಗೆ ಗಲಾಟೆ ಆಯ್ತೆಂದು ತಿಳಿಯುತ್ತಿಲ್ಲ ಎಂದು ಎಚ್‍ಡಿಕೆ ಅವರು ಹೇಳಿದರು.
Advertisement
Advertisement
ಶನಿವಾರದವರೆಗೂ ಮಂಗಳೂರಿನಲ್ಲಿ ಕರ್ಫ್ಯೂ ಇತ್ತು. ಇವತ್ತು ಕರ್ಫ್ಯೂ ತೆಗೆದ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬಂದೆ. ನನ್ನ ಭೇಟಿಗೆ ರಾಜಕೀಯ ಬೆರಿಸೋದು ಬೇಡ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಕೋಮುಗಲಭೆ ಆಗುತ್ತಿತ್ತು. ಆದರೆ ಇದು ಪೊಲೀಸರು ಮತ್ತು ಸಾರ್ವಜನಿಕರ ನಡುವೆ ನಡೆದ ಘಟನೆ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. 7-8 ಜನ ಬುಲೆಟ್ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಬಗ್ಗೆ ಯಾರೂ ಮಾಹಿತಿ ಕೊಟ್ಟಿಲ್ಲ. ಪೊಲೀಸರು ಅನಾಗರಿಕರ ರೀತಿ ವರ್ತಿಸಿದ್ದಾರೆ. ಇತ್ತ ಸಿಎಂ ಆತುರವಾಗಿ ಬಂದು ಸಭೆ ಮಾಡಿದರು, ಆದರೆ ಸ್ಥಳೀಯ ಜನಪ್ರತಿನಿಧಿಗಳು ಜನರಿಗೆ ಭರವಸೆ ಮೂಡಿಸುವ ಕೆಲಸ ಮಾಡೊಲ್ಲ. ಅವರಿಗೆ ಮಾನವೀಯತೆ ಇಲ್ಲ. ಸಿಎಂ ಬಂದು ಪುಟ್ಟ ಹೋದ ಪುಟ್ಟ ಅಂತ ಬಂದು ಹೋದರು. ಹಿಂದುತ್ವ ಅಂತ ಭಾಷಣ ಬಿಗಿಯೋ ನಾಯಕರು ಮಾನವೀಯತೆ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
Advertisement
Advertisement
ಸರ್ಕಾರ ಡಿಸೆಂಬರ್ 19ಕ್ಕೆ ಪ್ರತಿಭಟನೆ ಮಾಡಿ ಅಂತ ಪೊಲೀಸರು ಕೆಲ ಸಂಘಟನೆ ಅನುಮತಿ ನೀಡಿದ್ದರು. ಆದರೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದರು. ಇಂತಹ ಘಟನೆ ಆಗುತ್ತೆ ಅಂತ ಸರ್ಕಾರಕ್ಕೆ ಮಾಹಿತಿ ಇತ್ತಾ? ಬೆಳಗ್ಗೆ ಅನುಮತಿ ಕೊಟ್ಟು ರಾತ್ರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಮಾಡಿ ತಕ್ಷಣ ಸೆಕ್ಷನ್ ಜಾರಿ ಮಾಡಿದ್ದಾರೆ. ಸೆಕ್ಷನ್ ಜಾರಿ ವಿಚಾರವಾಗಿ ಸರ್ಕಾರ ಸರಿಯಾಗಿ ಕ್ರಮ ತೆಗೆದುಕೊಂಡಿಲ್ಲ ಎಂದು ಎಚ್‍ಡಿಕೆ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬೇರೆ ಎಲ್ಲೂ ಗಲಾಟೆ ಆಗಿಲ್ಲ. ಆದರೆ ಮಂಗಳೂರಿನಲ್ಲಿ ಯಾಕೆ ಹೀಗೆ ಆಯ್ತು? ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲು ಬಂದಿದ್ದು ಯಾರು? ಮಾಜಿ ಮೇಯರ್ ಜನರನ್ನ ಸಮಾಧಾನ ಮಾಡಲು ಪೊಲೀಸರೇ ಕರೆಸಿದ್ದರು. ಈಗ ಅವರು ಐಸಿಯುನಲ್ಲಿ ಇದ್ದಾರೆ. ಪೊಲೀಸರದ್ದೇ ತಪ್ಪಿದೆ ಅಂತ ಕೆಲ ಪತ್ರಿಕೆಯಲ್ಲಿ ಬರೆದಿದ್ದಾರೆ. ಇಬ್ಬರು ಅಮಾಯಕರ ಜೀವ ಇವತ್ತು ಕಳೆದು ಹೋಗಿದೆ. ಜಲೀಲ್ ಅನ್ನೋರು ಮಕ್ಕಳನ್ನ ಶಾಲೆಯಿಂದ ಕರೆದುಕೊಂಡು ಬರೋವಾಗ ಗುಂಡೇಟು ಬಿಟ್ಟಿದೆ. ಇದು ಮಾನವೀಯತೆ ಇರೋ ಸರ್ಕಾರನಾ? ಪರಿಹಾರ ನೀಡೋಕು ಸಿಎಂ ಮೀನಾಮೇಷ ಏಣುಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಮಾನವೀಯತೆ ಇದೆ. ಆದರೆ ಸಿಎಂ ಮುಖದಲ್ಲಿ ತಪ್ಪು ಮಾಡಿದ್ದೇವೆ ಅನ್ನೊ ಭಾವನೆ ಇರಲಿಲ್ಲ. ಅಮಾಯಕರನ್ನ ಈ ಸರ್ಕಾರ ಕೊಲೆ ಮಾಡಿದೆ. ಸಿಎಂ ಜೊತೆ ಪಟಾಲಂಗಳು ಬಂದಿದ್ದರು. ಉಡುಪಿ ಸಂಸದರು ಬಾಯಿಗೆ ಬಂದಂತೆ ಮಾತಾಡ್ತಾರೆ. ಬಿಜೆಪಿ ಅವರು ಸ್ಯಾಡಿಸ್ಟ್ ಗಳು. ರಾಜ್ಯದಲ್ಲಿ ಗೃಹ ಸಚಿವ ಇದ್ದಾನಾ? ಘಟನೆ ಇಲ್ಲಿ ಆದ್ರೆ ದೆಹಲಿಯಲ್ಲಿ ಗೃಹ ಮಂತ್ರಿ ಇದ್ದಾನೆ? ಡಿಸಿ ಎಲ್ಲಿ ಇದ್ದಾನೆ ಎಂದು ಪ್ರಶ್ನಿಸಿ ಏಕವಚನದಲ್ಲಿ ಮಾಜಿ ಸಿಎಂ ಗುಡುಗಿದರು.
ಗೋಲಿಬಾರ್ ನಿಂದ ಜನರು ಸತ್ತಿಲ್ಲ. ಈ ಸರ್ಕಾರ ಅವರನ್ನ ಕೊಲೆ ಮಾಡಿದೆ. ಗಾಯಗೊಂಡವರ ಬಗ್ಗೆ ಯಾರಾದರು ಮಾತಾಡಿದ್ದೀರಾ? ಏನಾದರು ಪರಿಹಾರ ಕೊಟ್ಟಿದ್ದೀರಾ? ವಿದ್ಯಾರ್ಥಿ ವೇತನಕ್ಕೆ ಬಂದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹಾಗೂ ವೆಲ್ಡರ್ ಒಬ್ಬ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಸಿಎಂ ಆಸ್ಪತ್ರೆಗೆ ಹೋಗಿ ಮಾಹಿತಿ ತಗೋಬೇಕಾಗಿತ್ತು. ಆದರೆ ಸಿಎಂ ಏನು ಮಾಹಿತಿ ತಗೊಂಡಿರಿ ನೀವು ಎಂದು ಪ್ರಶ್ನಿಸಿ ಕಿಡಿಕಾರಿದರು.
ಪೊಲೀಸರು ಆಸ್ಪತ್ರೆಗೆ ನುಗ್ಗಿ ಡೋರ್ ಯಾಕೆ ಹೊಡೆದರು? ಕೂಡಲೇ ಸಿಎಂ ಇಂತಹ ಅಧಿಕಾರಿಗಳನ್ನ ಅಮಾನತು ಮಾಡಿ. ಗೃಹ ಸಚಿವರನ್ನ ಕೈಬಿಡಿ. ಈ ಗೃಹ ಸಚಿವರು ಗೃಹ ಮಂತ್ರಿ ಆಗೋಕೆ ನಾಲಾಯಕ್ ಎಂದು ಹರಿಹಾಯ್ದರು. ನಾಚಿಕೆ ಆಗಬೇಕು ನಿಮಗೆ. ಸಿಎಂ ಆಗಿ ನೀವು ಏನ್ ಮಾಡಿದ್ದೀರಾ? ವೆಪನ್ ತಂದಿದ್ದರು ಅದಕ್ಕೆ ಗುಂಡು ಹಾರಿಸಿದೆವು ಅಂತ ಅಧಿಕಾರಿಗಳು ಹೇಳುತ್ತಾರೆ. ಇತ್ತ ಸಿಎಂ, ಪೊಲೀಸ್ ಠಾಣೆಗೆ ವೆಪನ್ ತೆಗೆಯಲು ಜನ ನುಗ್ಗಲು ಹೋದರು. ಅದಕ್ಕೆ ಗುಂಡು ಹಾರಿಸಿದರು ಎಂದು ಹೇಳಿದರು. ಯಾರ ಮೇಲೆ ತನಿಖೆ ಮಾಡ್ತೀರಾ? ಪೊಲೀಸ್ ಅಧಿಕಾರಿಯೊಬ್ಬರು, ಇಷ್ಟು ಗೋಲಿಬಾರ್ ಮಾಡಿ ಒಬ್ಬರು ಸತ್ತಿಲ್ಲ ಅಂತಾರೆ ಎಂದು ಪೊಲೀಸ್ ಅಧಿಕಾರಿ ಶಾಂತರಾಮ್ ಕುಂದೂರ್ ವಿರುದ್ಧವು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದರು.