ರಾಮನಗರ: ಜಿಲ್ಲೆಗೆ ಬೆಂಗಳೂರು ದಕ್ಷಿಣ (Bengaluru South) ಅಲ್ಲದಿದ್ರೆ ದೆಹಲಿ ಅಥವಾ ದುಬೈ ಅಂತಾ ನಾಮಕರಣ ಮಾಡಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ.
ಶೀಘ್ರದಲ್ಲೇ ರಾಮನಗರಕ್ಕೆ ಮರುನಾಮಕರಣ ಮಾಡ್ತೀವಿ ಎಂಬ ಡಿಕೆಶಿ (DK Shivakumar) ಹೇಳಿಕೆಗೆ ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಬೆಂಗಳೂರು ದಕ್ಷಿಣ ಅಲ್ಲದಿದ್ರೆ ದೆಹಲಿ ಅಂತ ಮಾಡಲಿ. ದೆಹಲಿ ಅಂತ ಮಾಡಿದ್ರೆ ಪ್ರಪಂಚದ ಮೂಲೆಮೂಲೆಯಿಂದ ಎಲ್ಲರೂ ಬರ್ತಾರೆ. ರಾಮನಗರವನ್ನ ಬೆಂಗಳೂರು ದಕ್ಷಿಣ ಅಂತ ಮಾಡೋದು ಬೇಡ, ದೆಹಲಿ ಅಥವಾ ದುಬೈ ಅಂತಾನೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ.
ಹೆಸರು ಬದಲಾವಣೆ ಮಾಡೋದ್ರಿಂದ ಯಾರೂ ಬರಲ್ಲ. ನೀವೇನು ಮೂಲ ಸೌಕರ್ಯ ಕೊಡ್ತೀರಿ? ಅಭಿವೃದ್ಧಿ ಮಾಡ್ತೀರಿ? ಅದರ ಮೇಲೆ ಜನ ಬರ್ತಾರೆ. ಡಿಕೆಶಿ ಅವರಿಗೆ ಬೇರೆ ಕೆಲಸ ಇಲ್ಲ, ಜನರ ಕೆಲಸ ಮಾಡಲ್ಲ. ಜನರ ಗಮನಸೆಳೆಯೋಕೆ ಹೀಗೆ ಮಾತನಾಡ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಇನ್ನೂ ಬಿಡದಿಯನ್ನ ಗ್ರೇಟರ್ ಬೆಂಗಳೂರಿಗೆ ಸೇರ್ಪಡೆ ಬಗ್ಗೆ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಇಂತಹ ಇನ್ನೂ 20 ಘೋಷಣೆ ಮಾಡಲಿ. ನನ್ನ ಜಿಲ್ಲೆಗೆ ಅಭಿವೃದ್ಧಿಗೆ ಯಾವುದೇ ತಕರಾರಿಲ್ಲ. ಏನ್ ಗ್ರೇಟರ್ ಬೆಂಗಳೂರು ಮಾಡ್ತಾರೋ ಮಾಡಲಿ. ಈಗ ನಾವು ಬೆಂಗಳೂರನ್ನೇ ನೋಡ್ತಿಲ್ವಾ? ಮಳೆ ಬಂದಾಗ ಬೆಂಗಳೂರು ಏನಾಗ್ತಿದೆ? 2004ರಲ್ಲಿ ಬೆಂಗಳೂರನ್ನ ಸಿಂಗಾಪುರ ಮಾಡ್ತೀವಿ ಅಂದಿದ್ದರು. ಮಳೆ ಆದಾಗ ಏನಾಯ್ತು ಅಂತ ನೀವೆ ತೋರಿಸಿದ್ರಲ್ಲಾ? ಕಂದಾಯ ಸಚಿವರ ಕ್ಷೇತ್ರದಲ್ಲೇ ಏನಾಯ್ತು ಅಂತ ನೋಡಿದ್ವಲ್ಲ, ಇದೇ ಗ್ರೇಟರ್ ಬೆಂಗಳೂರು. ನಾನ್ ಕಾಣದೇ ಇರೋದಾ ಇದೆಲ್ಲಾ? ಎಂದು ಲೇವಡಿ ಮಾಡಿದ್ದಾರೆ.