-ಸರ್ಕಾರಕ್ಕೆ ಅಂತಿಮ ಕಾಲ ಹತ್ತಿರ ಬಂದಿದೆ
– ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ
Advertisement
ರಾಮನಗರ: ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ (BJP- JDS) ಅಶ್ವಮೇಧ ಆರಂಭಿಸಿದ್ದು, ಈ ಸರ್ಕಾರದ ಅಂತಿಮ ಕಾಲ ಹತ್ತಿರದಲ್ಲಿಯೇ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
Advertisement
ರಾಮನಗರದಲ್ಲಿ (Ramnagar) ಮೈಸೂರು ಚಲೋ (Mysuru Chalo) ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ. ನಿಮ್ಮ ಲೆಕ್ಕ ಚುಕ್ತಾ ಮಾಡುತ್ತೇವೆ. ಅಶ್ವಮೇಧಕ್ಕೆ ಚಾಲನೆ ಕೊಟ್ಟಿದ್ದೇವೆ. ನಿಮ್ಮನ್ನು ಮುಗಿಸುವ ಕಾಲ ಹತ್ತಿರ ಬಂದಿದೆ. ಈ ಸರ್ಕಾರ ಯಡಿಯೂರಪ್ಪ ಅವರ ವಿಷಯದಲ್ಲಿ ಅಮಾನುಷವಾಗಿ ವರ್ಸಿಸಿದೆ. ಅವರ ಮನಸ್ಸಿಗೆ ನೋವು ಕೊಟ್ಟಿದೆ. ನಿಮ್ಮ ಪಾಪದ ಕೊಡ ತುಂಬಿ, ನಿಮ್ಮ ಅಂತಿಮ ಕಾಲ ಹತ್ತಿರಕ್ಕೆ ಬಂದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ಬಿಜೆಪಿ-ಜೆಡಿಎಸ್ ಶವಯಾತ್ರೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಕಲಬುರ್ಗಿಯಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶವಯಾತ್ರೆ ಮಾಡಿಸಿದ್ದಾರಲ್ಲ, ಆ ಅಧಿಕಾರಿಯನ್ನು ಬಲಿ ತೆಗೆದುಕೊಂಡು ಆ ಕುಟುಂಬವನ್ನು ಬೀದಿಪಾಲು ಮಾಡಿದ್ದೀರಲ್ಲ. ನಿಮ್ಮ ಪ್ರಾಮಾಣಿಕತೆ ಎಂದರೆ ಇದೇನಾ? ಪೊಲೀಸ್ ಅಧಿಕಾರಿಗಳೇ ನೀವು ಜನರಿಗೆ, ಕರ್ತವ್ಯಕ್ಕೆ ನಿಷ್ಠರಾಗಿ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ಮೇಲೆ ಸಿಕ್ಕ ಸಿಕ್ಕವರಿಗೆಲ್ಲ ಕೇಸ್ ಹಾಕುತ್ತಿದ್ದೀರಿ. ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನ್ನ ಗಮನಕ್ಕೂ ಬರುತ್ತಿದೆ. ಪರಮೇಶ್ವರ್ ಅವರೇ, ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸಿ. ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮಡದಿಯ ಪರಿಸ್ಥಿತಿ ಏನು? ಈಗಲಾದರೂ ಪೊಲೀಸರು ಈ ಸರ್ಕಾರದ ವರ್ತನೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹರಿಹಾಯ್ದಿದ್ದಾರೆ.
Advertisement
ನಾಡಿನ ಬಡ ಜನತೆ ಬೆವರು ಸುರಿಸಿ, ತೆರಿಗೆ ರೂಪದಲ್ಲಿ ಕಟ್ಟಿದ ಹಣ ಲೂಟಿ ಆಗುತ್ತಿದೆ. ಪರಿಶಿಷ್ಟರ ಹಣ ಲೂಟಿ ಮಾಡಿರುವ ಈ ಸರ್ಕಾರ ಇರಬೇಕೋ, ಬೇಡವೋ ಎನ್ನುವ ಕಾರ್ಯಕ್ರಮ ಇದು. ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೀರಿ. ಮಾತೆತ್ತಿದರೆ 136 ಸೀಟು ಗೆದ್ದಿದ್ದೇವೆ ಎನ್ನುತ್ತೀರಿ. ಶೀಘ್ರದಲ್ಲೇ ನೀವು 16 ಸೀಟಿಗೆ ಬಂದು ನಿಲ್ಲುವ ದಿನ ದೂರವಿಲ್ಲ ಎಂದು ಅವರು ಕುಟುಕಿದ್ದಾರೆ.
ನನ್ನ ಬಗ್ಗೆ, ವಿಜಯೇಂದ್ರ ಬಗ್ಗೆ ಸಿಡಿ ಶಿವು ಅವರು ಅತ್ಯಂತ ಲಘುವಾಗಿ ಮಾತಾಡಿದ್ದಾರೆ. ನನ್ನ ಬಗ್ಗೆ, ನನ್ನ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹೌದು. ಬೆಂಗಳೂರಿನಲ್ಲಿ ಕಸ ತೆಗೆಯುವ ಕೆಲಸ ಮಾಡುತ್ತಿದ್ದೆ. ಜಯನಗರ, ವಿಲ್ಸನ್ ಗಾರ್ಡನ್, ಸುಧಾಮನಗರ ವಾರ್ಡುಗಳಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆ ತೆಗೆದುಕೊಂಡಿದ್ದೆ. ಯಾರೋ ಹಿರಿಯರು ನನಗೆ ರಾಜಕೀಯಕ್ಕೆ ಬರಲು ಹೇಳಿ, ನೀನು ಕಸ ತೆಗೆಯುವ ಜಾಗ ಬೇರೆ ಇದೆ. ಅಲ್ಲಿ ಹೋಗಿ ಕೆಲಸ ಮಾಡು ಎಂದು ಹೇಳಿದರು. ಅದಕ್ಕೆ ರಾಜಕೀಯಕ್ಕೆ ಬಂದೆ. ನಾನು ಮತ್ತು ಬಿಜೆಪಿಯವರು ಕಾಂಗ್ರೆಸ್ ಭ್ರಷ್ಟಾಚಾರದ ಕಸ ಕ್ಲೀನ್ ಮಾಡಲು ಹೊರಟಿದ್ದೇವೆ. ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯವಸ್ಥೆಯನ್ನು ಹಾಳು ಮಾಡಿದ್ದೀರಿ. ಅದನ್ನೇ ಸ್ವಚ್ಛ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ.