ಮಂಡ್ಯ: ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಚನ್ನಪಟ್ಟಣ (Channapatna) ಜೆಡಿಎಸ್ ಭದ್ರಕೋಟೆ ಅನ್ನೋದು ದೆಹಲಿ ಮಟ್ಟದಲ್ಲೂ ಗೊತ್ತಿದೆ. ನ್ಯಾಯಯುತವಾಗಿ ಚರ್ಚೆ ಮಾಡೋದಾದ್ರೆ ಚನ್ನಪಟ್ಟಣ ಟಿಕೆಟ್ ನಮಗೆ ಬರಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು.
ಮಂಡ್ಯದ (Mandya) ಪಾಂಡವಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಟಿಕೆಟ್ ವಿಚಾರದಲ್ಲಿ ಗೊಂದಲ ಏನು ಇಲ್ಲ. ಯೋಗೇಶ್ವರ್ ಸಹ ನಿಲ್ಲಬೇಕು ಅಂತಾ ಹೇಳ್ತಾರೆ. ನ್ಯಾಯಯುತವಾಗಿ ಚರ್ಚೆ ಮಾಡೋದಾದ್ರೆ ಚನ್ನಪಟ್ಟಣ ನಮಗೆ ಬರಬೇಕು. ಮೂರು ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ವಿಚಾರದಲ್ಲಿ ನಮ್ಮ ಪಕ್ಷದ ಪರವಾಗಿ ನಿರ್ಧಾರ ಮಾಡಬೇಕು. ಅದೇ ನಿಟ್ಟಿನಲ್ಲಿ ಚರ್ಚೆಯಾಗುತ್ತಿದೆ. ಇಂದು ಈ ಬಗ್ಗೆ ಸಭೆ ಇದೆ. ಇಂದೇ ಅಭ್ಯರ್ಥಿ ಘೋಷಣೆ ಆಗುತ್ತೆ ಎಂದು ತಿಳಿಸಿದರು. ಇದನ್ನೂ ಓದಿ: ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರೆಡ್ಡಿ-ರಾಮುಲು
ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ:
ದೆಹಲಿ ಮಟ್ಟದಲ್ಲಿ ಚನ್ನಪಟ್ಟಣ ಟಿಕೆಟ್ ಸಮಸ್ಯೆ ಇಲ್ಲ. ಕಳೆದ ಎರಡು ಬಾರಿ ಚನ್ನಪಟ್ಟಣದಲ್ಲಿ ನಾನು ಪ್ರತಿನಿಧಿಸಿದ್ದೇನೆ. ಚನ್ನಪಟ್ಟಣ ಜೆಡಿಎಸ್ ಕ್ಷೇತ್ರ ಅನ್ನೋದು ದೆಹಲಿ ಮಟ್ಟದಲ್ಲಿ ಗೊತ್ತಿದೆ. ಮೂರು ಉಪಚುನಾವಣೆ ಕ್ಷೇತ್ರಗಳ ಪೈಕಿ ಚನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಪಡೆ ಇದೆ. ಗೆಲ್ಲುವ ದೃಷ್ಟಿಯಿಂದ ಬಿಜೆಪಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಟ್ಟುಕೊಟ್ಟೆವು. ನಮ್ಮ ಕುಟುಂಬದವರನ್ನೇ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇವೆ. ಆ ರೀತಿ ಔದಾರ್ಯ ಅವರ ಕಡೆಯಿಂದಲೂ ಬರಬೇಕು ಎನ್ನುತ್ತಾ ಪರೋಕ್ಷವಾಗಿ ಸಿಪಿವೈ ಜೆಡಿಎಸ್ ಚಿಹ್ನೆಯಡಿ ನಿಲ್ಲಲಿ ಎಂದು ಕುಮಾರಸ್ವಾಮಿ ಹೇಳಿದರು. ಇದನ್ನೂ ಓದಿ: ಸರೋಜಕ್ಕ ಸಾಕ್ಷಾತ್ ಅನ್ನಪೂರ್ಣೇಶ್ವರಿ ಆಗಿದ್ದರು: ನಟ ಸುದೀಪ್ ತಾಯಿ ನಿಧನಕ್ಕೆ ಬೊಮ್ಮಾಯಿ ಸಂತಾಪ
ನಮ್ಮಲ್ಲಿ ಒಡಕು ಮೂಡಲಿ ಅಂತ ಕಾಂಗ್ರೆಸ್ ಭಕಪಕ್ಷಿ ರೀತಿ ಕಾಯ್ತಿದೆ:
ಸಿ.ಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸುತ್ತಿರುವ ವಿಚಾರ ಕುರಿತು ಮಾತನಾಡಿದ ಹೆಚ್‌ಡಿಕೆ, ನಾಮಪತ್ರ ಸಲ್ಲಿಸುವ ವಿಚಾರ ನನ್ನೊಂದಿಗೆ ಚರ್ಚೆಯಾಗಿಲ್ಲ. ನನ್ನ ಮುಂದೆ ಆ ಕುರಿತು ಪ್ರಸ್ತಾಪವೂ ಬಂದಿಲ್ಲ. ಮಾಧ್ಯಮಗಳಲ್ಲಿ ವರದಿ ಬಂದಿರುವುದನ್ನು ನೋಡಿದ್ದೇನೆ. ಕಾಂಗ್ರೆಸ್ ನಾಯಕರನ್ನ ಭೇಟಿ ಮಾಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗ್ತಾರೆ ಎಂಬ ವಿಚಾರ 15 ದಿವಸದಿಂದ ಓಡಾಡ್ತಿದೆ. ಕಾಂಗ್ರೆಸ್ ನವರು ತಮ್ಮ ಪಕ್ಷಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸಲು ಕಾಯ್ತಿದ್ದಾರೆ. ನಮ್ಮಲ್ಲಿ ಒಡಕು ಮೂಡಲಿ ಎಂದು ಭಕಪಕ್ಷಿ ರೀತಿ ಕಾಯ್ತಿದ್ದಾರೆ. ಸ್ವತಂತ್ರವಾಗಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಒಡಕು ತರಲು ಶ್ರಮ ಹಾಕ್ತಿದ್ದಾರೆ. ಅಂತಹ ಅವಕಾಶ ಕಲ್ಪಿಸಬಾರದೆಂದು ತಾಳ್ಮೆಯಲ್ಲಿದ್ದೇನೆ. ಇನ್ನೂ 4 ದಿನ ಇದೆ, ಕೂತು ಚರ್ಚೆ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಚನ್ನಪಟ್ಟಣವನ್ನು ಜೆಡಿಎಸ್ ಬಿಟ್ಟಿದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಹೋರಾಟ ಮಾಡದೇ ಸನ್ಯಾಸತ್ವ ಸ್ವೀಕಾರ ಮಾಡಿದ್ದೀವಾ? ನಾವು ಚುನಾವಣೆ ಗೆಲ್ಲಲು ಏನು ನಿರ್ಧಾರ ಮಾಡಬೇಕು ಮಾಡ್ತೀನಿ ಎಂದು ಹೇಳಿದರು. ಇದನ್ನೂ ಓದಿ: 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಗೆದ್ದ ಕಿವೀಸ್ – ಟೀಂ ಇಂಡಿಯಾ ಸೋಲಿಗೆ ಕಾರಣಗಳೇನು?
ಮಾಜಿ ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುರೇಶ್ ಸಂಸ್ಕೃತಿಯ ಬಗ್ಗೆ ನಾನು ಮಾತಡಲ್ಲ. ಅವರು ಏನೇ ಚರ್ಚೆ ಮಾಡಿದ್ರೂ ನನಗೆ ಸಂಬಂಧ ಇಲ್ಲ. ಜನರು ಬಹುನಿರೀಕ್ಷೆ ಇಟ್ಟು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಕಾಂಗ್ರೆಸ್‌ಗೆ 136 ಸೀಟ್‌ಗಳನ್ನು ಕೊಟ್ಟಿರೋದು ನಿಜ. ಈ ಕಾಂಗ್ರೆಸ್ ರಾಜ್ಯದಲ್ಲಿ ಯಾವ ರೀತಿ ಕೆಲಸ ಮಾಡ್ತಾ ಇದೆ. ದಿನವೂ ಒಂದೊಂದು ಅಕ್ರಮಗಳು ಬೆಳಕಿಗೆ ಬರ್ತಾ ಇವೆ. ಸಿಎಂ ನನಗೆ ಮಣ್ಣಿನ ಮೇಲೆ ಆಸೆ ಇಲ್ಲ ಅಂತಾ ಪದೇ ಪದೇ ಹೇಳ್ತಾರೆ. ಈಗ ಒಂದೊಂದೇ ಉದುರುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಮುಂದೆ ಏನು ಬೇಕಾದರೂ ಆಗಬಹುದಾಗಿದೆ ಎಂದು ಭವಿಷ್ಯ ನುಡಿದರು.
ನನಗೆ 5 ವರ್ಷದ ಪೂರ್ಣ ಬಹುಮತದ ಸರ್ಕಾರ ಜನರು ನೀಡಬಹುದು ಎಂಬ ವಿಶ್ವಾಸವಿದೆ. ನಾನು ವಿಶ್ವಾಸ ಇಟ್ಟುಕೊಳ್ಳಲು ಅವರ ಪರ್ಮಿಷನ್ ತಗೋ ಬೇಕಾ? 5 ವರ್ಷದ ಸರ್ಕಾರ ಬಂದ್ರೆ ನನದ್ದೇ ಆದ ಅಭಿವೃದ್ಧಿ ಕೆಲಸಗಳು ಇವೆ. ಜನರ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ಹಾಕಿಕೊಂಡಿದ್ದೇನೆ. ನಮ್ಮ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕರ್ನಾಟಕ ಸಂಪದ್ಬರಿತವಾದ ರಾಜ್ಯ. ಆದ್ರೆ ಈಗ ಸರ್ಕಾರದ ದುಡ್ಡು ಪೋಲು ಮಾಡ್ತಾ ಇದ್ದಾರೆ. ಇದಕ್ಕೆ ಕಡಿವಾಣ ಹಾಕಿ ಜನರ ನೆಮ್ಮದಿ ಬದುಕಿಗಾಗಿ ನನಗೆ ಅವಕಾಶ ನೀಡುತ್ತಾರೆ ಎನ್ನೋದು ತಪ್ಪಾ? ನನ್ನ ಮಾತಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನನ್ನ ತೀರ್ಮಾನದಲ್ಲೂ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.