– ಸಿದ್ರಾಮಯ್ಯ ರಾಜ್ಯದ ಮೇಲೆ 5.5 ಲಕ್ಷ ಕೋಟಿ ಸಾಲ ಹೊರಿಸಿದ್ದಾರೆ
– ಮೋದಿ ಅವರ ಮಾತು ಕೇಳಿದ್ರೆ ನಾನೂ 5 ಬಾರಿ ಸಿಎಂ ಆಗಿರ್ತಿದ್ದೆ
– ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು: ರಾಜ್ಯದ ಸಾಲ ಸದ್ಯ 7.5 ಲಕ್ಷ ರೂಪಾಯಿ ಇದೆ. ಇದ್ರಲ್ಲಿ 5.5 ಲಕ್ಷ ಕೋಟಿ ಸಾಲ ಸಿದ್ದರಾಮಯ್ಯನವರೇ (Siddaramaiah) ನಾಡಿನ ಮೇಲೆ ಹೊರಿಸಿದ್ದಾರೆ. ರಾಜ್ಯದ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಿದ್ದಾರೆ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಕ್ರಾಂತಿಯ ಬಾಂಬ್ ಸಿಡಿಸಿದರು.
ಜೆಡಿಎಸ್ ರಜತಮಹೋತ್ಸವದ ಅಂಗವಾಗಿ ಇಂದು ಬೆಂಗಳೂರಿನಲ್ಲಿರುವ (Bengaluru) ಪಕ್ಷದ ಕಚೇರಿ ಎದುರು ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆ ಆಗಬೇಕು. ಜೆಡಿಎಸ್ (JDS) ಅನ್ನ ಅಧಿಕಾರಕ್ಕೆ ತರಬೇಕು ಅನ್ನೋದಕ್ಕಿಂತ ಇವತ್ತು ರಾಜ್ಯದ ರಾಜಕೀಯ ಹೇಗೆ ನಡೆಯುತ್ತಿದೆ ಅನ್ನೋದ್ರ ಬಗ್ಗೆ ಯೋಚಿಸಬೇಕು. ಈ ರಾಜ್ಯ ಸಂಪದ್ಭರಿತ ರಾಜ್ಯ. ಕಳೆದ 25-30 ವರ್ಷಗಳಲ್ಲಿ ದೇಶದ ಕೊಡುಗೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದ್ರೀಗ ರಾಜ್ಯದ ಸಾಲದ ಪ್ರಮಾಣ 7.5 ಲಕ್ಷ ಕೋಟಿ ರೂ. ಆಗಿದೆ. ಇದರಲ್ಲಿ ಸಿದ್ದರಾಮಯ್ಯ ಸಾಲದ (Loan) ಪಾಲು 5.5 ಲಕ್ಷ ಕೋಟಿ ರೂ. ಇದೆ. ಈ ನಾಡಿನ ಮೇಲೆ ಇಷ್ಟು ಸಾಲ ಹೊರಿಸಿದ್ದಾರೆ. ಈಗಾಗಲೇ ಬೇಸತ್ತಿರುವ ಜನ ಈ ಸರ್ಕಾರವನ್ನ ಕಿತ್ತೊಗೆಯಬೇಕು ಅಂತ ಕಾಯ್ತಾ ಇದ್ದಾರೆ. ಏಕೆಂದ್ರೆ ಈ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಚಿಂತೆಯಿಲ್ಲ. ಮುಂದಿನ 6-7 ತಿಂಗಳಲ್ಲಿ ಯಾರೂ ನಿರೀಕ್ಷಿಸದ ರೀತಿ ಬೆಳವಣಿಗೆಗಳು ರಾಜ್ಯದಲ್ಲಿ ಆಗುವ ಸಾಧ್ಯತೆಯಿದೆ ಅಂತ ಹೊಸ ಕ್ರಾಂತಿಯ ಬಾಂಬ್ ಸಿಡಿಸಿದರು.
ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಕೊಟ್ಟಿದ್ದೇನೆ ಅಂತಾರೆ. ಅವರ ಗ್ಯಾರಂಟಿ (Guarantee Scheme) ಕಾರ್ಯಕ್ರಮ ಜನರ ಜೀವನಕ್ಕೆ ಶಕ್ತಿ ತುಂಬುತ್ತಿಲ್ಲ. ಎಷ್ಟು ದಿನ 2 ಸಾವಿರ ಕೊಡೋಕೆ ಸಾಧ್ಯ? ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ 50 ಸಾವಿರ ಕೋಟಿ ರೂಪಾಯಿ ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿದ್ದೀನಿ ಅಂತಾರೆ. ಆದರೆ ಜನರ ಜೇಬಿಗೆ ಕೈಹಾಕಿ ದರೋಡೆ ಮಾಡ್ತಿದೆ ಸರ್ಕಾರ. ಎಣ್ಣೆ, ಸ್ಟಾಂಪ್ ಡ್ಯೂಟಿ ಸೇರಿ ಎಲ್ಲ ಕಡೆ ಹಣ ಲೂಟಿ ಮಾಡ್ತಾ ಇದ್ದಾರೆ. ಇದು ಯಾಕೆ ಜನರಿಗೆ ಅರ್ಥ ಆಗ್ತಿಲ್ಲ? ಮೆಕ್ಕೆಜೋಳ ಖರೀದಿ ಮಾಡ್ತಿಲ್ಲ, ಗುಂಡಿ ಮುಚ್ಚಿಲ್ಲ, ಈಗ ಕಸ ಗುಡಿಸೋ ಯಂತ್ರ ಅಂತಿದ್ದಾರೆ. ಇಂತಹ ಸರ್ಕಾರ ಬೇಕಾ ಈ ರಾಜ್ಯಕ್ಕೆ? ಪ್ರವಾಹ ಪರಿಹಾರ ಇನ್ನು ಕೊಟ್ಟಿಲ್ಲ. ಈಗ ಪ್ರಧಾನಿಗೆ ಪತ್ರ ಕೊಟ್ಟಿದ್ದಾರೆ. ಇಂತಹ ಸರ್ಕಾರ ಬೇಕಾ ಅಂತ ಜನ ಯೋಚನೆ ಮಾಡಬೇಕು ಎಂದು ಜನರನ್ನ ಎಚ್ಚರಿಸಿದರು.
ಗೌಡರ ಹೋರಾಟದಿಂದ ಕಾಂಗ್ರೆಸೇತರ ಸರ್ಕಾರ ಬಂತು
ಇನ್ನೂ ದೇವೇಗೌಡರ ರಾಜಕೀಯ ಹಾದಿ ನೆನೆಯುತ್ತಾ… 1973 ರಿಂದ ದೇವೇಗೌಡರು ರಾಜಕೀಯ ಮಾಡಿದ್ದಾರೆ. ವಿರೋಧ ಪಕ್ಷ ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಅಂತ ದೇವೇಗೌಡರು ತೋರಿಸಿಕೊಟ್ಟಿದ್ದಾರೆ. 1973 ರಿಂದ ಅವರ ರಾಜಕೀಯವನ್ನ ಗಮನಿಸಿಕೊಂಡು ಬಂದಿದ್ದೇನೆ. ದೇವೇಗೌಡರ ಹೋರಾಟ ದೇಶದಲ್ಲಿ ಮೇರು ಪರ್ವತ. ಯಾವುದೇ ತಪ್ಪು ಮಾಡದೇ ಎಲ್ಲಾ ತಪ್ಪು ಅವರ ತಲೆ ಮೇಲೆ ಹಾಕಿಕೊಂಡವರು ದೇವೇಗೌಡರು. ಹೆಗರೆ, ಪಟೇಲ್ ಜೊತೆ ಇದ್ದಾಗ ಅವರ ರಾಜಕೀಯ ನೋಡಿದ್ದೇನೆ. ದೇವೇಗೌಡರ ಭಾವನೆ ಬಡವರು, ಹೆಣ್ಣುಮಕ್ಕಳ ಬದುಕು, ರೈತರಿಗಾಗಿ ಅವರನ್ನ ಮುಡಿಪಾಗಿಟ್ಟಿದ್ದರು. ಅವರ ವಿಷಯ ದೇವೇಗೌಡ ಈಡೇರಿಕೆ ಮಾಡಲು ಆಗಲಿಲ್ಲ. 60 ವರ್ಷದ ರಾಜಕೀಯದಲ್ಲಿ 4 ವರ್ಷ ಮಂತ್ರಿ, ಸಿಎಂ, ಪ್ರಧಾನಿ ಆಗಿ ಕಡಿಮೆ ದಿನ ಇದ್ದರು. 1983 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ಸೇತರರ ಸರ್ಕಾರ ಬಂದು ನರಗುಂದ, ನವಲಗುಂದ ಹೋರಾಟಕ್ಕೆ ಕಾರಣ ಆಯ್ತು. ಗುಂಡೂರಾವ್ ಸರ್ಕಾರದಲ್ಲಿ ಒಬ್ಬ ಮಂತ್ರಿ ಸರ್ಕಾರಿ ಕಾರ್ಯಕ್ರಮ ಆಗೋವಾಗ ಗೋಲಿಬಾರ್ ಆಗುತ್ತದೆ. ಆಗ ಅವತ್ತಿನ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿದ್ದು ದೇವೇಗೌಡರು. ಆವತ್ತು ಯಾವುದೇ ನಾಯಕರು ದೇವೇಗೌಡರ ಹೋರಾಟಕ್ಕೆ ಬೆಂಬಲ ಕೊಡಲಿಲ್ಲ. ಬೆಂಗಳೂರಿನ ಜನರು ಅವರಿಗೆ ಬೆಂಬಲ ಕೊಟ್ಟರು. ಈ ಹೋರಾಟದಿಂದ ಕಾಂಗ್ರೆಸೇತರ ಸರ್ಕಾರ ಬರಲು ಸಾಧ್ಯವಾಯ್ತು ಎಂದು ಸ್ಮರಿಸಿದರು.
ದೇವೇಗೌಡರು ಯಾವತ್ತೂ ಅಧಿಕಾರ ಬಯಸಲಿಲ್ಲ
ದೇವೇಗೌಡರು ಯಾವತ್ತೂ ಅಧಿಕಾರಕ್ಕೆ ಯಾರ ಮನೆ ಬಾಗಿಲಿಗೆ ಹೋಗಲಿಲ್ಲ. ಅವರಿಗೆ ಬರೋ ಅವಕಾಶ ಬೇರೆ ಅವರಿಗೆ ಕೊಡಿಸಿದ್ರು. ಸಿಎಂ ವಿಷಯದಲ್ಲಿ ಚರ್ಚೆ ಆಗಿತ್ತು. ಅದಕ್ಕೆ ನಾವೇ ಸಾಕ್ಷಿ. ರಾಮಕೃಷ್ಣ ಹೆಗಡೆ ಪರವಾಗಿ ದೇವೇಗೌಡರು ಬೆಂಬಲ ಕೊಟ್ರು. ಆಗ ಹೆಗಡೆ ಸಿಎಂ ಆದ್ರು. ದೇವೇಗೌಡರು ಜನತಾ ಪಾರ್ಟಿ ಕಟ್ಟಲು ಹಗಲು ರಾತ್ರಿ ಹೋರಾಟ ಮಾಡಿದ್ರು. ಆಗ ಅಂದಿನ ಸಿಎಂ ಅವರು ದೇವೇಗೌಡರ ಮೇಲೆ ಮೈಸೂರಿನಲ್ಲಿ 500 ಸೈಟ್ ಅಕ್ರಮ ಆರೋಪ ಮಾಡಿಸಿದ್ರು. ಸಿಒಡಿ, ಲೋಕಾಯುಕ್ತ ತನಿಖೆ ಕೂಡ ಮಾಡಿಸಿದ್ರು ಎಂದು ತಿಳಿಸಿದರು.
ತಂದೆ ವಿರುದ್ಧವಾಗಿ ಯಾವತ್ತೂ ನಡೆದುಕೊಂಡಿಲ್ಲ
ನಾನು ಡಿಸ್ಟ್ರಿಬ್ಯೂಟರ್ ಆಗಿದ್ದೆ. 1999 ರಲ್ಲಿ ನಾನು, ದೇವೇಗೌಡ, ರೇವಣ್ಣ ಸೋತಿದ್ವಿ. 2002 ರಲ್ಲಿ ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಿತ್ತು. ಆಗ ದೇವೇಗೌಡರಿಗೆ ನಿಂತುಕೊಳ್ಳಿ ಅಂತ ಹೇಳಿದೆ, ಆಗ ಪಾರ್ಲಿಮೆಂಟ್‌ಗೆ ನಿಂತ್ರು. ತೆನೆಹೊತ್ತ ಮಹಿಳೆ ಚಿಹ್ನಿಗೆ ಮೊದಲು ದೇವೇಗೌಡರು ನಿಂತರು. ಮೊದಲ ಚುನಾವಣೆ ಅದು. ಚುನಾವಣೆ ಪ್ರಚಾರದ ಮೇಲೆ ಬ್ಯಾನರ್ ನಲ್ಲಿ ಈಗಿನ ಸಿಎಂ ಫೋಟೊ ಇರಲಿಲ್ಲ. ಆಗ ಸಿದ್ದರಾಮಯ್ಯ ಅವರು ನಾನು ಬರಲ್ಲ ಅಂತ ಹೇಳಿದ್ರು. ನಾವು ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಬ್ಯಾನರ್ ಕಟ್ಟೋದು ನಾವು. ಎಲ್ಲಾ ರೆಡಿ ಆದ ಮೇಲೆ ಇವರು ಬಂದು ದೇವೇಗೌಡರಿಗೆ ಕಾಲು ತಾಗಿಸಿಕೊಂಡು ವೇದಿಕೆ ಮೇಲೆ ಕೂತುಕೊಳ್ತಿದ್ದದ್ರು. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನನ್ನ ಜೀವನದಲ್ಲಿ ಒಂದು ಸಾರಿ ದೇವೇಗೌಡರಲ್ಲಿ ವಿರುದ್ಧ 2006 ರಲ್ಲಿ ನಡೆದುಕೊಂಡೆ. ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಮಾತ್ರ ನಮ್ಮ ತಂದೆ ಇಚ್ಛೆಗೆ ವಿರುದ್ಧ ಹೋದೆ. ಅದು ಬಿಟ್ಟು ಇನ್ಯಾವುದು ವಿರುದ್ಧವಾಗಿ ನಾನು ನಡೆದುಕೊಂಡಿಲ್ಲ. ಆ ನಂತರ ಸೋನಿಯಾ ಗಾಂಧಿ ಅವ್ರ ಮನೆಗೆ ನನ್ನನ್ನ ದೇವೇಗೌಡರೇ ಕರೆದುಕೊಂಡು ಹೋಗಿದ್ದರು ಎಂದು ನುಡಿದರು.
ನಾಡಿನ ಜನಕ್ಕೆ ಕುಮಾರಸ್ವಾಮಿ ಪ್ರಶ್ನೆ
ಕೆಲವರು ಜೆಡಿಎಸ್ ಮುಗಿದೇ ಹೋಗುತ್ತೆ ಅಂತಾರೆ. ಆದ್ರೆ ನಿಷ್ಟಾವಂತ ಕಾರ್ಯಕರ್ತರು ಪಕ್ಷ ಉಳಿಸಿದ್ದಾರೆ. ರಜತ ಮಹೋತ್ಸವ ಕಾರ್ಯಕ್ರಮ ಇನ್ನೂಂದು ದಿನ ಇದೆ. ಮುಂದಿನ 2 ತಿಂಗಳು ಎಲ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡ್ತೀವಿ. ನಿತೀಶ್ ಕುಮಾರ್ 1985 ರಲ್ಲಿ ರಾಜಕೀಯಕ್ಕೆ ಬಂದರು. 10 ಬಾರಿ ಸಿಎಂ ಆಗೋಕೆ ಅನೇಕ ಪಕ್ಷಗಳ ಜತೆ ಹೋಗಿದ್ದಾರೆ ಕರ್ನಾಟಕದ ಜನತೆಯಲ್ಲಿ ಕೈಜೋಡಿಸಿ ಕೇಳ್ತೀವಿ ನಾವೇನು ತಪ್ಪು ಮಾಡಿದ್ದೇವೆ? ನಾವೇನು ದ್ರೋಹ ಮಾಡಿದ್ದೀವಿ? ಯಾಕೆ ಜೆಡಿಎಸ್ ತಿರಸ್ಕಾರ ಮಾಡಿದ್ರಿ? ನಾವೇನು ಅನ್ಯಾಯ ಮಾಡಿದ್ವಿ? ನಮಗೆ ಜಾತಿ ಇಲ್ಲ. ಯಾಕೆ ನಮ್ಮನ್ನ ಕೈ ಹಿಡಿಯಲಿಲ್ಲ? ನಾವು ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಯಾಕೆ ನಮ್ಮ ಮೇಲೆ ಕೋಪ? 5 ವರ್ಷ ನಮ್ಮ ಸರ್ಕಾರಕ್ಕೆ ಒಂದೇ ಒಂದು ಅವಕಾಶ ಕೊಡಿ. ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ಕೊಡ್ತೀನಿ. ಯಶಸ್ವಿಯಾಗದೇ ಹೋದರೆ ನಾನು ನಿಮಗೆ ಮುಖ ತೋರಿಸಲ್ಲ ಅಂತ ಕುಮಾರಸ್ವಾಮಿ ಶಪಥ ಮಾಡಿದ್ರು.
ನೀನೇ ಸಿಎಂ ಆಗು ಅಂತ ಮೋದಿ ಹೇಳಿದ್ರು
ನಾನು ಎರಡು ಬಾರಿ ಸಿಎಂ ಆಗಿದ್ದು ಸಂಪೂರ್ಣ ಬಹುಮತದಿಂದ ಅಲ್ಲ. ಬಿಜೆಪಿ- ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದೆ. ಎರಡು ಬಾರಿ ಸಿಎಂ ಆಗಿದ್ದಾಗ ಹಣ ಮಾಡಲಿಲ್ಲ, ಲಾಟರಿ, ಸಾರಾಯಿ ನಿಷೇಧ ಮಾಡಿದೆ, ಸಾಲಮನ್ನಾ ಮಾಡಿದೆ, ಅಭಿವೃದ್ಧಿ ಕೆಲಸ ಮಾಡಿದೆ. ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಕರ್ನಾಟಕದ ಜನ ಶಿಕ್ಷೆ ಕೊಡ್ತೀರಾ? ನಾನು ಸಿಎಂ ಆಗಿದ್ದಾಗ ಯಾವುದೇ ಪಕ್ಷದ ಶಾಸಕರಿದ್ದರೂ ಅನುದಾನ ಕೊಟ್ಡಿದ್ದೇನೆ. 2018ರ ಚುನಾವಣೆಯಲ್ಲಿ ಮೋದಿ ಅವರು ಒಂದೂವರೆ ಗಂಟೆ ನನ್ನೊಂದಿಗೆ ಮಾತನಾಡಿದ್ರು, ನೀನೇ ಸಿಎಂ ಆಗು ಅಂತ ಹೇಳಿದ್ರಯ. ನಿತೀಶ್ ಕುಮಾರ್ ಅವರ ತರಹ ನಾನು ಆವತ್ತು ತೀರ್ಮಾನ ಮಾಡಿದ್ದಿದ್ದರೇ, ಅವರ ಅರ್ಧದಷ್ಟು ಸಿಎಂ ಆಗುತ್ತಿದ್ದೆ. ಆದ್ರೆ ನಮ್ಮ ತಂದೆ ವಿರುದ್ಧವಾಗಿ ನಾನು ಹೋಗಲಿಲ್ಲ ಎಂದು ಹೇಳಿದರು.


