Connect with us

Bengaluru City

ಬರಗಾಲ, ನೆರೆಗೆ ಸ್ಪಂದಿಸದ್ದಕ್ಕೆ ಮೋದಿಗೆ ಜನ ಉತ್ತರ ನೀಡಿದ್ದಾರೆ – ಎಚ್‍ಡಿಕೆ

Published

on

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಾಗ ಜನ ಹೇಗೆ ಉತ್ತರ ಕೊಟ್ಟರೋ ಮುಂದೆ ಬಿಜೆಪಿಗೂ ಇದೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಭವಿಷ್ಯ ನುಡಿದಿದ್ದಾರೆ.

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಗರದ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದ್ವೇಷ ರಾಜಕಾರಣವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜನರು ಇವರಿಗೆ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ಇಂದಿರಾಗಾಂಧಿ ತುರ್ತು ಪರಿಸ್ಥಿತಿ ತಂದಾಗ ಜನ ಹೇಗೆ ಉತ್ತರ ಕೊಟ್ರೋ ಮುಂದೆ ಬಿಜೆಪಿಗೂ ಇದೇ ಆಗುತ್ತದೆ. ಇದು ಮೋದಿಗೆ ಎಚ್ಚರಿಕೆ ಸಂದೇಶ ಎಂದರು.

ಎರಡು ರಾಜ್ಯ ಗೆಲ್ಲಲು ಪ್ರಧಾನಿ, ಗೃಹ ಸಚಿವರು ಪಣ ತೊಟ್ಟಿದ್ರು. ನಾನು ದೆಹಲಿಗೆ ಹೋದಾಗ ಕೆಲವರು ಹರ್ಯಾಣ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಹೀಗಾಗಿ ಕಷ್ಟ ಅಂತ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಸೀಟು ಕಡಿಮೆ ಆಗಿದೆ. ಬರಗಾಲ, ನೆರೆಗೆ ಪ್ರಧಾನಿ ಸ್ಪಂದನೆ ನೀಡಿಲ್ಲ. ಜನರಿಗೆ ಭರವಸೆ ನೀಡೋ ಕೆಲಸ ಮಾಡಿಲ್ಲ. ಕೇವಲ ಆರ್ಟಿಕಲ್ 370 ಬಗ್ಗೆ ಮಾತ್ರ ಮಾತಾಡಿದರು. ಮುಂದೆ ಈ ಫಲಿತಾಂಶ ಏನ್ ಆಗುತ್ತೋ ಗೊತ್ತಿಲ್ಲ ಎಂದು ಹೇಳಿದ್ದರು. ಇಂದಿನ ತೀರ್ಪು ಬಿಜೆಪಿ ಪರ ಜನ ಇಲ್ಲ ಅನ್ನೋದು ತೋರಿಸುತ್ತದೆ. ಈ ತೀರ್ಪು ಮತದಾರರನ್ನ ದಾರಿ ತಪ್ಪಿಸಲು ಸಾಧ್ಯವಿಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಯದಲ್ಲಿ ಚುನಾವಣಾ ಪ್ರಚಾರ ಮಾಡಿದವು. ದೇಶದ ವ್ಯವಸ್ಥೆ ಬಗ್ಗೆ ಜನರ ಮುಂದೆ ಇಡೋದಕ್ಕೆ ಹಾಗೂ ಕೆಲವರು ಚುನಾವಣೆ ಪ್ರಚಾರಕ್ಕೂ ಹೋಗದೆ ಭಯ ಬಿದ್ರು. ಚುನಾವಣೆ ಸಮೀಕ್ಷೆ ಕೂಡ ಬಿಜೆಪಿಗೆ ಬಹುಮತ ಅಂತ ಹೆಳುತ್ತಿತ್ತು. ಆದರೆ ಚುನಾವಣಾ ಸಮೀಕ್ಷೆ ಬುಡಮೇಲು ಆಗಿದೆ ಎಂದರು.

ಆಳುವ ಪಕ್ಷಗಳಿಗೆ ಇದು ಎಚ್ಚರಿಕೆ ಸಂದೇಶವಾಗಿದ್ದು, ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿ ಬಂದಾಗಿನಿಂದ ದೇಶದ ವ್ಯವಸ್ಥೆ ಬದಲಾಗುತ್ತಿದೆ. ಸ್ವತಂತ್ರವಾಗಿ ಸಂಸ್ಥೆಗಳು ಕೆಲಸ ಮಾಡಲು ಆಗದ ರೀತಿ ಬಂದಿದೆ. ಅಘೋಷಿತ ತುರ್ತು ಪರಿಸ್ಥಿತಿ ದೇಶದಲ್ಲಿ ಇದೆ. ಇತ್ತೀಚೆಗೆ ಮಾಧ್ಯಮಗಳು ಸರ್ಕಾರದ ವಿಷಯಗಳನ್ನ ದಿಟ್ಟವಾಗಿ ಹೇಳುತ್ತಿವೆ. ಕೆಲ ಮಾಧ್ಯಮಗಳು ಸತ್ಯವನ್ನ ಹೇಳುತ್ತಿವೆ ಎಂದು ತಿಳಿಸಿದರು.

ಬಿಜೆಪಿಯವರು ವಿರೋಧ ಪಕ್ಷ ಇರಬಾರದು ಅಂತ ಅಜೆಂಡಾ ಇಟ್ಟುಕೊಂಡು ಇದ್ದಾರೆ. ಆದರೆ ಇದು ಸಾಧ್ಯವಿಲ್ಲ ಅಂತ ಜನ ತೋರಿಸಿದ್ದಾರೆ. ಕೇಂದ್ರ ಸರ್ಕಾರ ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳದೆ ಇದ್ದರೆ ಮುಂದೆ ಕಷ್ಟ ಅನ್ನೋ ಸಂದೇಶ ಜನ ಕೊಟ್ಟಿದ್ದಾರೆ. ವಿರೋಧ ಪಕ್ಷ ನಾಶ ಮಾಡಲು ಸಾಧ್ಯವಿಲ್ಲ ಅಂತ ಜನ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ಈ ಫಲಿತಾಂಶ ಕರ್ನಾಟಕದ ಉಪ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶ್ರಮ ಪಟ್ಟು ಸರ್ಕಾರ ರಚನೆ ಮಾಡಿದ್ದಾರೆ. ಸ್ವಲ್ಪ ದಿನದಲ್ಲಿ 100 ದಿನ ಪೂರೈಸುತ್ತಿದ್ದಾರೆ. ಎಲ್ಲವನ್ನೂ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿಗೆ ಉಪ ಚುನಾವಣೆ ಸುಲಭವಲ್ಲ. ಉಪ ಚುನಾವಣೆ ನಡೆಯುತ್ತಾ, ಮಧ್ಯಂತರ ಚುನಾವಣೆ ಆಗುತ್ತಾ ನೋಡಬೇಕು. ತೀರ್ಪು ಏನು ಬರುತ್ತೋ ನೋಡೋಣ ಅಂದರು.

ದೇಶದಲ್ಲಿ ಅಮಾಯಕರ ಮೇಲೆ ಕಾನೂನು ಬಾಹಿರವಾಗಿ ದಬ್ಬಾಳಿಕೆ ನಡೆಯುತ್ತಿದೆ. ಸಾಂವಿಧಾನಿಕ ಸಂಸ್ಥೆಗಳು ಇಂದು ಕಪಿಮುಷ್ಠಿಯಲ್ಲಿ ಇವೆ. ದೇಶದಲ್ಲಿ ವಿಪಕ್ಷಗಳು ಅಧಿಕಾರಕ್ಕೆ ಬರಬೇಕು ಅನ್ನೋದಕ್ಕಿಂತ ಒಟ್ಟಾಗಿ ಹೋಗಬೇಕು ಅನ್ನೋ ಸಂದೇಶ ಇವತ್ತು ಸಿಕ್ಕಿದೆ. ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಪಾಠ ಕಲಿಸ್ತಾರೆ. ಹರ್ಯಾಣ, ಮಹಾರಾಷ್ಟ್ರದಲ್ಲಿ ಆಪರೇಷನ್ ಗೆ ಬಲಿಯಾದವರು ಇವತ್ತು ಸೋತಿದ್ದಾರೆ. ರಾಜ್ಯದಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂದರು.

Click to comment

Leave a Reply

Your email address will not be published. Required fields are marked *