-ಕುಟುಂಬದಿಂದ ಯಾರು ಸ್ಪರ್ಧೆ ಮಾಡಲ್ಲ
ಬೆಂಗಳೂರು: ಉಪಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿ ಸ್ಪರ್ಧೆ ಮಾಡಲಿದ್ದು, ನಮ್ಮ ಕುಟುಂಬದಿಂದ ಯಾರು ಕಣಕ್ಕಿಳಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಸ್ಪಷ್ಟಪಡಿಸಿದರು.
ಆಪರೇಷನ್ ಕಮಲದ ಎರಡನೇ ಪ್ರಕರಣದಿಂದಾಗಿ ಇಂದು ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದಿದೆ. ಚುನಾವಣಾ ಆಯೋಗ ಈಗಾಗಲೇ ದಿನಾಂಕ ಪ್ರಕಟವಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಪಕ್ಷದ ಮುಖಂಡರು ಕಳೆದ ಒಂದು ತಿಂಗಳಿನಿಂದ ಕಾರ್ಯಕರ್ತರ ಸಭೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರಡು ದಿನಗಳಲ್ಲಿ 15 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಮಾಡಲಾಗುತ್ತದೆ ಎಂದು ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
Advertisement
Advertisement
ಕುಟುಂಬದಿಂದ ಸ್ಪರ್ಧೆ ಇಲ್ಲ: ಮಾಧ್ಯಮಗಳಲ್ಲಿ ಉಪಕದನದಲ್ಲಿ ದೇವೇಗೌಡರ ಕುಟುಂಬಸ್ಥರು ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿಗಳು ಬಿತ್ತರವಾಗಿರೋದು ನನ್ನ ಗಮನಕ್ಕೆ ಬಂದಿದೆ. ಇಲ್ಲಿಯವರೆಗೂ ಅನುಭವಿಸಿರು ಹಿಂಸೆ ಸಾಕಾಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತ ಸಹ ನನ್ನ ಕುಟುಂಬದ ಸದಸ್ಯ ಎಂದು ನಂಬಿದ್ದೇನೆ. ಈ ಉಪ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರು ಅಭ್ಯರ್ಥಿಗಳು ಆಗಲ್ಲ. ಕೆಲವು ಕ್ಷೇತ್ರಗಳಲ್ಲಿ ಕುಟುಂಬಸ್ಥರು ನಿಲ್ಲಬೇಕೆಂಬ ಒತ್ತಡಗಳ ನಡುವೆ ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣ, ನಿಖಿಲ್ ಅವರ ಸ್ಪರ್ಧೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
Advertisement
15 ಕ್ಷೇತ್ರಗಳನ್ನು ಅತ್ಯಂತ ಗಂಭೀರ್ಯವಾಗಿ ತೆಗೆದುಕೊಂಡಿದ್ದು ಎಲ್ಲ ಕಡೆಯೂ ದಳ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದೇವೆ. ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಯಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡವಳಿಕೆ ಜನರು ಗಮನಿಸಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಕೆಲಸ ಮಾಡಿದ್ದೇನೆ. ಇವೆಲ್ಲದರ ಜೊತೆಗೆ ಕಾಂಗ್ರೆಸ್ ಕಾರ್ಯಕ್ರಮಗಳಿಗೂ ಅನುದಾನ ನೀಡಲಾಗಿತ್ತು. ಸಾಲಮನ್ನಾ, ಋಣಮುಕ್ತ, ಬಡವರ ಬಂಧು ಯೋಜನೆಗಳು ಬಡವರಿಗೆ ಸಹಾಯವಾಗಿವೆ. ಈ ಎಲ್ಲ ಜನಪರ ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
Advertisement
ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಗ್ಗೆ ನಾನು ಚರ್ಚೆ ಮಾಡಿಲ್ಲ. ಕಳೆದ ಕೆಲವು ದಿನಗಳಿಂದ ಸಿದ್ದರಾಮಯ್ಯ ಮತ್ತು ಸ್ಥಳೀಯರ ಹೇಳಿಕೆಗಳನ್ನು ಗಮನಿಸಿದ್ದೇನೆ. ಕಾಂಗ್ರೆಸ್ ನಾಯಕರ ನಾಟಕಗಳೆಲ್ಲ ನನಗೆ ಗೊತ್ತಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ತಮ್ಮ ಮನಸಾಕ್ಷಿಗೆ ಕೇಳಿಕೊಳ್ಳಲಿ. ಚುನಾವಣೆ ಸಮಯದಲ್ಲಿ ಯಾರಿಂದಲೂ ನಮಗೆ ಸಹಕಾರ ಸಿಗಿಲಿಲ್ಲ. ಆದ್ರೆ ನಾನು ಕಾಂಗ್ರೆಸ್ ನಿಂದ ಸೋತಿದ್ದೇನೆ ಎಂದು ಹೇಳಲ್ಲ ಮತ್ತು ಅದರ ಅವಶ್ಯಕತೆ ನನಗಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಜೊತೆ ಸೇರಿಕೊಂಡು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಲು ಹೋಗಿದ್ದೇಕೆ ಅವರಿಗೆ ನಾಚಿಕೆ ಆಗಲ್ವಾ? ಇಂದು ಮಂಡ್ಯದಲ್ಲಿ ಬೆಳದಿರುವ ಕಬ್ಬು ಕಾರ್ಖಾನೆಗೆ ಹೋಗದ ಸ್ಥಿತಿಯಲ್ಲಿದ್ದು, ಸ್ವಾಭಿಮಾನದ ಹೆಸರಲ್ಲಿ ಗೆದ್ದವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಗೆ ನೀಡಿರುವ ಅನುದಾನವನ್ನ ಕಡಿತಗೊಳಿಸುವ ಬಿಜೆಪಿ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಯಾರ ಸಹವಾಸಕ್ಕೂ ಹೋಗದೇ ನೆಮ್ಮದಿಯಾಗಿ ಕಣಕ್ಕಿಳಿಯುತ್ತೇವೆ. ಜನರ ವಿಶ್ವಾಸವನ್ನು ಗಳಿಸುವತ್ತ ಕೆಲಸ ಮಾಡುತ್ತೇವೆ ಎಂದರು.