– ಹರ್ಷರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದ ಎಚ್‍ಡಿಕೆ
– ಎಚ್‍ಡಿಕೆಯ ಸಿಡಿ ಆರೋಪಕ್ಕೆ ತಿರುಗೇಟು ನೀಡಿದ್ದ ಹರ್ಷ
ಮಂಗಳೂರು: ಗೋಲಿಬಾರ್ ಪ್ರಕರಣದ ಬಳಿಕ ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ವಿರುದ್ಧ ಕಿಡಿಕಾರಿ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಎಚ್‍ಡಿಕೆಯನ್ನು ಹರ್ಷ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಉಳ್ಳಾಲದಲ್ಲಿರುವ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಡಾ.ಪಿಎಸ್ ಹರ್ಷ ಮಾತುಕತೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದು ನಂತರ ಕುಮಾರಸ್ವಾಮಿಯವರನ್ನು ಆಯುಕ್ತ ಹರ್ಷ ಭೇಟಿ ಮಾಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಕುರಿತು ಸಿಸಿಟಿವಿ ದೃಶ್ಯ ಆಧರಿಸಿ ಕೂಡಲೇ ಆರೋಪಿ ಪತ್ತೆ ಮಾಡಬೇಕು. ಇದಕ್ಕೇ ಹದಿನೈದು ದಿನ ಅಥವಾ ತಿಂಗಳ ಸಮಯ ಪಡೆದು, ಬಳಿಕ ಪೊಲೀಸರು ಮತ್ತೊಂದು ಕಥೆ ಸೃಷ್ಟಿಸಬಾರದು. ಅಲ್ಲಿ ಸುತ್ತ ಸಿಸಿಟಿವಿಗಳಿವೆ, ಬಾಂಬ್ ಯಾರು ಇಟ್ಟಿದ್ದೆಂದು ಪತ್ತೆ ಹಚ್ಚುವುದು ದೊಡ್ಡದಲ್ಲ. ತನಿಖೆ ನಡೆಸಲು ಪೊಲೀಸರು ಮತ್ತೊಂದು ತಿಂಗಳು ತೆಗೆದುಕೊಳ್ಳಬಾರದು. ನಂತರ ತಿಂಗಳು ಬಿಟ್ಟು ಮತ್ತೊಂದು ಕಥೆ ಸೃಷ್ಟಿಸಬಾರದು. ವಾಸ್ತವಾಂಶವನ್ನು ಜನರ ಮುಂದಿಡಬೇಕು ಎಂದು ಬಾಂಬ್ ಪತ್ತೆಯಾದ ಕುರಿತು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಇಬ್ಬರು ಭೇಟಿಯಾಗಿರುವುದು ವಿಶೇಷ.
ಸರ್ಕಾರ ಕೆಲ ಪೊಲೀಸರಿಂದ ಜನತೆಯಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂಬುದು ನನ್ನ ಭಾವನೆ. ಟೌನ್‍ಹಾಲ್ ಬಳಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಿದ ಘಟನೆಗೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಏಳು ಕಲ್ಲುಗಳು ಬಿದ್ದಿವೆ ಎನ್ನುತ್ತಾರೆ. ಆದರೆ ಒಂದು ತಿಂಗಳಿಂದ ಯಾಕೆ ಹೇಳಿಲ್ಲ, ಒಂದು ವರ್ಗದ ಜನರನ್ನು ಓಲೈಸಲು ಅಮಾಯಕರನ್ನು ಬಲಿ ಕೊಡಲಾಗುತ್ತಿದೆ. ಅಲ್ಲಿ ಮಾಧ್ಯಮದ ಕ್ಯಾಮರಾಗಳು ಇದ್ದವು. ಕಲ್ಲು ಹೊಡೆದ ಸೂಕ್ಷ್ಮ ವಸ್ತುವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ದೇಶದ ಜನರ ನಡುವೆ ಪರಸ್ಪರ ಅಪನಂಬಿಕೆಯನ್ನುಂಟು ಮಾಡುವ ಕೆಲಸವನ್ನು ಸರ್ಕಾರವೇ ಮಾಡುತ್ತಿದ್ದು, ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಎಚ್‍ಡಿಕೆಯಿಂದ ಸಿಡಿ ಬಿಡುಗಡೆ:
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆ 35 ದೃಶ್ಯಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ ಮತ್ತೊಂದು ಕಾಶ್ಮೀರ ಮಾಡಲು ಸರ್ಕಾರ ಹೊರಟಿದೆ. ಇದನ್ನು ತೋರಿಸಲು ಈ ವಿಡಿಯೋ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದ್ದರು.
ಸರ್ಕಾರ ಯಾವುದೇ ತಪ್ಪು ಮಾಡದೇ ಇದ್ದಿದ್ದರೆ, ಪೊಲೀಸರು ಇಂತಹ ವರ್ತನೆ ತೋರಿಸದೇ ಹೋಗಿದ್ದರೆ ಏನು ಆಗುತ್ತಿರಲಿಲ್ಲ. ಎಲ್ಲ ಜಿಲ್ಲೆಯಲ್ಲಿ ಪ್ರತಿಭಟನೆ ನಡೆದಿದೆ. ಆದರೆ ಮಂಗಳೂರಿನಲ್ಲಿ ಮಾತ್ರ ಇಂತಹ ಘಟನೆ ನಡೆದಿದ್ದು, ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ್ದರು. ಈ ಎಲ್ಲ ಘಟನೆಗಳಿಗೆ ಪೊಲೀಸ್ ಆಯುಕ್ತ ಹರ್ಷ ಅವರೇ ಕಾರಣ. ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ಎಚ್‍ಡಿಕೆ ಆಗ್ರಹಿಸಿದ್ದರು.
ಪ್ರಕರಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ತನಿಖೆ ಮಾಡುತ್ತಿದ್ದಾರೆ. ಸರ್ಕಾರ ಹೇಳಿದಂತೆ ಅವರು ವರದಿ ನೀಡುತ್ತಾರೆ. ಜನತಾ ಅದಾಲತ್ ನಲ್ಲಿ ಜನರೇ ಈ ವಿಡಿಯೋ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರೇ ಇಲ್ಲಿ ತಪ್ಪು ಮಾಡಿದ್ದಾರೆ. ಅಂಗಡಿ ಮುಂದೆ ನಿಂತವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಕಲ್ಲು ತುಂಬಿದ್ದ ಗಾಡಿ 4 ಟ್ರಿಪ್ ಬೇರೆ ಕಡೆ ಹೊಡೆದಿತ್ತು. ಉದ್ದೇಶ ಪೂರ್ವಕವಾಗಿ ಕಲ್ಲು ತುಂಬಿಸಿಕೊಂಡು ಬಂದಿರಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆ ಮಾಡಿದ್ದೇನೆ ಎಂದು ತಿಳಿಸಿದ್ದರು.
ತಿರುಗೇಟು ನೀಡಿದ್ದ ಹರ್ಷ:
ಎಚ್‍ಡಿಕೆಯ ಸಿಡಿ ಆರೋಪಕ್ಕೆ ಉತ್ತರಿಸಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ, ಸಿಐಡಿ ಮತ್ತು ಮ್ಯಾಜಿಸ್ಟ್ರೀಯಲ್ ತನಿಖೆ ಬಳಿಕ ಮಂಗಳೂರು ಗಲಭೆಯ ಮೂಲ ಸತ್ಯ ಬಯಲಾಗಲಿದೆ. ಅಲ್ಲಿಯವರೆಗೆ ಎಡಿಟ್ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿ. ಇತ್ತೀಚೆಗೆ ಕೆಲವರು ಆಯ್ದ ವಿಡಿಯೋವನ್ನು ತಮಗೆ ಬೇಕಾದ ರೀತಿ ಎಡಿಟ್ ಮಾಡಿ ಬಿಡುಗಡೆ ಮಾಡಿದ್ದಾರೆ. ಆದರೆ ಗಲಭೆಯ ಸತ್ಯಾಂಶ ಮುಂದೆ ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಹೇಳಿ ತಿರುಗೇಟು ನೀಡಿದ್ದರು.