ಹೆಚ್ಚಾದ ದೋಸ್ತಿ ‘ದಂಗಲ್’ – ಕುಮಾರಸ್ವಾಮಿಯಿಂದ ದಿಢೀರ್ ಎಚ್‍ಡಿಡಿ ಭೇಟಿ

Public TV
2 Min Read
CM HDK

ಬೆಂಗಳೂರು: ರಾಜ್ಯ ದೋಸ್ತಿ ಸರ್ಕಾರದ ನಾಯಕರ ನಡುವೇ ಮಾತಿನ ಸಮರಕ್ಕೆ ಕಾರಣವಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರ ಹೇಳಿಕೆ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರು ಇಂದು ಬೆಂಗಳೂರಿಗೆ ಆಗಮಿಸಿ ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ.

ನಗರದ ಪದ್ಮನಾಭ ನಗರದಲ್ಲಿ ಇರುವ ಎಚ್‍ಡಿಡಿ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಅವರು ಭೇಟಿ ಮಾತುಕತೆ ನಡೆಸಿದರು. ಮಡಿಕೇರಿಯ ರೆಸಾರ್ಟ್ ನಲ್ಲಿ ವಿಶ್ರಾಂತಿ ಮುಗಿಸಿ ಬಳಿಕ ನೇರವಾಗಿ ಸಿಎಂ ತಂದೆಯವರ ನಿವಾಸಕ್ಕೆ ಭೇಟಿ ನೀಡಿದ್ದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ತಮ್ಮ ಭೇಟಿ ವೇಳೆ ದೇವೇಗೌಡರ ಆರೋಗ್ಯ ವಿಚಾರಿಸುವ ಜೊತೆಗೆ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

HDD HOME

ಇತ್ತ ಸಿಎಂ ಕುಮಾರಸ್ವಾಮಿ ಅವರು ಇಂದು ರಾಜ್ಯದಲ್ಲಿ ನಡೆಯುತ್ತಿರುವ 2 ಕ್ಷೇತ್ರಗಳ ಉಪಚುನಾವಣೆಯಲ್ಲಿ ದೋಸ್ತಿ ಪಕ್ಷ ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ ವೇಳೆಗೆ ಕುಂದಗೋಳದಲ್ಲಿ ಭೇಟಿ ನೀಡಲಿರುವ ಸಿಎಂ ಎರಡು ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಈ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕುಂದಗೋಳ ಚುನಾವಣಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಾಥ್ ನೀಡಲಿದ್ದಾರೆ. ನಾಳೆಯೂ ಸಹ ಮೈತ್ರಿ ಅಭ್ಯರ್ಥಿಗಳ ಪರ ಸಿಎಂ ಪ್ರಚಾರ ನಡೆಸಲಿದ್ದು, ಈ ನಡುವೆ ಮೈತ್ರಿ ನಾಯಕರ ಮಧ್ಯೆ ಉಂಟಾಗುತ್ತಿರುವ ವೈಮನಸ್ಸನ್ನು ತಣಿಸಲು ಮುಂದಾಗುತ್ತರಾ ಎಂಬ ಕುತೂಹಲಮೂಡಿದೆ.

siddaraaoaa

ಸಿದ್ದರಾಮಯ್ಯ ಗರಂ:
ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿ ಅಲ್ಲ. ಉತ್ತಮವಾಗಿ ಆಡಳಿತ ನೀಡಿದ್ದರೆ ಯಾಕೆ 78 ಸ್ಥಾನವನ್ನು ಗಳಿಸಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿದ್ದಕ್ಕೆ ಸಿದ್ದರಾಮಯ್ಯ ಮತ್ತಷ್ಟು ಸಿಟ್ಟಾಗಿದ್ದಾರೆ.

ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿದ ಮಾಜಿ ಸಿಎಂ ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಹೊಟ್ಟೆಕಿಚ್ಚಿನ ಮಾತುಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಮೊದಲು ಜಿ.ಟಿ.ದೇವೇಗೌಡ,ಈಗ ವಿಶ್ವನಾಥ್… ಮುಂದೆ ಯಾರು ಗೊತ್ತಿಲ್ಲ. ನನ್ನನ್ನು ಗುರಿಯಾಗಿಸಿದ ಇಂತಹ ಬೇಜವಾಬ್ದಾರಿ ಹೇಳಿಕೆಗಳ ಬಗ್ಗೆ ಜೆಡಿಎಸ್ ವರಿಷ್ಠರು ಗಮನ ಹರಿಸುವುದು ಒಳಿತು. ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿಧರ್ಮ ನನ್ನ ಬಾಯಿ ಕಟ್ಟಿಹಾಕಿದೆ. ಇದರಿಂದಾಗಿ ಎಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ ಎಂದು ಗರಂ ಆಗಿ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

H.Vishwanath 1

Share This Article
Leave a Comment

Leave a Reply

Your email address will not be published. Required fields are marked *