ಸಿದ್ದರಾಮಯ್ಯ ಸಾಕಿರೋ ಗಿಣಿ ಅಲ್ಲ, ನನ್ನ ಬೆಳೆಸಿದ್ದು ರಾಮನಗರ ಜನ- ಸಿದ್ದುಗೆ ಹೆಚ್‍ಡಿಕೆ ತಿರುಗೇಟು

Public TV
2 Min Read
hdk siddu

ರಾಮನಗರ: ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ರಾಮನಗರದ ಜನ ನನ್ನನ್ನು ಬೆಳೆಸಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರ ಸಂಬಂಧ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದನ್ನು ಸಿದ್ದರಾಮಯ್ಯನವರು ಎಷ್ಟರಮಟ್ಟಿಗೆ ಸಹಿಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವರ ಪಕ್ಷದ ಶಾಸಕರ ಬಳಿಯೇ, ಪಾರ್ಲಿಮೆಂಟ್ ಚುನಾವಣೆಯ ನಂತರ ಈ ಸರ್ಕಾರ ಒಂದು ಸೆಕೆಂಡ್ ಇರಲು ಬಿಡಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರ ಗಿಣಿ ಕಥೆ, ಸಿದ್ದರಾಮಯ್ಯ ಮತ್ತು ಅವರಂತಹ ನೂರಾರು ಗಿಣಿಗಳನ್ನು ಸಾಕಿದಂತಹ ದೇವೇಗೌಡರಿಗೆ ಸಿದ್ದರಾಮಯ್ಯ ಸೇರಿದಂತೆ ಯಾರೆಲ್ಲ ಕುಕ್ಕಿದ್ದಾರೆ ಎಂಬುದು ಗೊತ್ತಿದೆ. ಆ ಬಗ್ಗೆ ಇತಿಹಾಸ ಬರೆಯುವವರು ಒಂದು ದಿನ ಬರೆಯುತ್ತಾರೆ ಎಂದು ಗುಡುಗಿದರು.

ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್ಸಿನ ಹೈಕಮಾಂಡ್ ಅವರು ತೀರ್ಮಾನ ತೆಗೆದುಕೊಂಡರು. ಅವರು ತೆಗೆದುಕೊಂಡ ತೀರ್ಮಾನವನ್ನು ಸಿದ್ದರಾಮಯ್ಯರು ಸಹಿಸಿಕೊಂಡಿಲ್ಲ. ಇಲ್ಲದಿದ್ದರೆ ಈ ಸರ್ಕಾರ ಹೋಗುತ್ತಿತ್ತಾ, ಹೋಗೋದಕ್ಕೆ ಕಾರಣ ಯಾರು, ಯಾರು ಯಾರು ಏನೇನು ಚರ್ಚೆ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿದ ಅವರು, ನಾನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ. ನನ್ನನ್ನು ಈ ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿ ಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ ಎಂದರು.

ಸಿದ್ದರಾಮಯ್ಯರ ನೆರಳಲ್ಲಿ ಬೆಳೆದಿಲ್ಲ. ಸಿದ್ದರಾಮಯ್ಯ ಬೆಳೆಸಿಲ್ಲ ಈ ತಾಲೂಕಿನ ಜನ ನನ್ನನ್ನು ಬೆಳೆಸಿದ್ದಾರೆ ಎಂದು ಮತ್ತೆ ಮತ್ತೆ ಪ್ರಸ್ತಾಪ ಮಾಡುವ ಮೂಲಕ ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‍ನಲ್ಲೇನಿದೆ..?
ಹೌದು ಕುಮಾರಸ್ವಾಮಿಯವರೇ ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು, ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ? ಎಂದು ಬರೆದು ಹೆಚ್ ಡಿ ಕುಮಾರಸ್ವಾಮಿ ಹಾಗೂ ಐಎನ್‍ಸಿ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ.

ರಮೇಶ್ ಕುಮಾರ್, ಹೆಚ್‍ಡಿಕೆ ಹೇಳಿದ್ದೇನು?
ಶನಿವಾರ ಹೊಸಕೋಟೆಯಲ್ಲಿ ಮಾತನಾಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ತಾವು ಸಾಕಿದ ಗಿಣಿಗಳೇ ಸಿದ್ದರಾಮಯ್ಯ ಅವರನ್ನು ಹದ್ದಾಗಿ ಕುಕ್ಕಿದರು ಎಂದು ಹೇಳಿದ್ದರು. ಇದಕ್ಕೆ ಟಾಂಗ್ ಕೊಟ್ಟ ಕುಮಾರಸ್ವಾಮಿ, ಈಗ ಕಾಂಗ್ರೆಸ್ ನಾಯಕರು ನಾಟಕವಾಡುತ್ತಿದ್ದಾರೆ. ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ನಮ್ಮ ಸರ್ಕಾರವನ್ನು ಕುಕ್ಕಿದವು ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *