ಬೆಂಗಳೂರು: ವಿಧಾನಸಭೆಯ ಅಧಿವೇಶನ ಆರಂಭವಾಗ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಜಿ.ಟಿ ದೇವೇಗೌಡರ ನಡುವಿನ ವಾಕ್ಸಮರ ಜೋರಾಗಿದೆ.
ಬೆಳಗ್ಗೆ ಅಧಿವೇಶನ ಆರಂಭಕ್ಕೂ ಮುನ್ನ ನಡೆದ ಜೆಡಿಎಲ್‍ಪಿ(ಜನತಾ ದಳ ಶಾಸಕಾಂಗ ಪಕ್ಷ) ಸಭೆಗೆ ಜಿಟಿಡಿ ಗೈರಾಗಿದ್ದರು. ಇದಕ್ಕೆ ಖಾರವಾಗಿಯೇ ಮಾತಾಡಿದ್ದ ಎಚ್‍ಡಿಕೆ, ಅವರು ಇನ್ನೂ ಜೆಡಿಎಸ್ ಪಕ್ಷದಲ್ಲಿ ಇದ್ದಾರೇನ್ರಿ? ಶಾಸಕಾಂಗ ಪಕ್ಷಕ್ಕೆ ಅಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿ ಹರಿಹಾಯ್ದಿದ್ದಾರೆ.
Advertisement
Advertisement
ಇದಕ್ಕೆ ಪ್ರತಿಕ್ರಿಯಿಸಿದ ಜಿಟಿಡಿ ಅವರು, ನನಗೆ ನೋವಾಗಿದ್ದಾಗಲು ನಾನು ಎಚ್‍ಡಿಕೆ ಬಗ್ಗೆ ಅಗೌರವ ತೋರಿಸಿಲ್ಲ. ಶಾಸಕಾಂಗ ಸಭೆಗೂ ಅಗೌರವ ತೋರಿಸಿಲ್ಲ. ಜೆಡಿಎಸ್ ಪಕ್ಷದಿಂದ ಯಾವ ನಿರ್ದೇಶನ ಬಂದಿರಲಿಲ್ಲ ಎಂದರು. ಬಳಿಕ ಜಿಟಿಡಿ ಜೆಡಿಎಸ್‍ನಲ್ಲಿದ್ದಾರಾ ಅನ್ನುವ ಎಚ್‍ಡಿಕೆ ಪ್ರಶ್ನೆ ಪ್ರತಿಕ್ರಿಯಿಸಿ, ಅವರು ಏಕೆ ಹಾಗೆ ಹೇಳಿದರೋ ಅವರನ್ನೇ ಕೇಳಿ ಎಂದು ಹೇಳಿದರು.
Advertisement
Advertisement
ಇತ್ತ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಎಚ್‍ಡಿಕೆ ಅವರು, ಮತ್ತೆ ಜಿಟಿಡಿ ಮಾತಿಗೆ ಪ್ರತ್ಯುತ್ತರ ನೀಡಿದರು. ಯಾಕೆ ಅವರಿಗೆ ಜೆಡಿಎಲ್‍ಪಿಗೆ ಬರಲು ಕರೆ ಕೊಟ್ಟಿರಲಿಲ್ಲವಾ? ವಿಧಾನಸಭೆಗೆ ಬಂದವರು ನಮ್ಮ ಪಕ್ಷದ ಜೆಡಿಎಲ್‍ಪಿ ಸಭೆಗೆ ಬರದೇ ಬೇರೆ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಅವರನ್ನು ಪಕ್ಷದಿಂದ ನಾನ್ಯಾಕೆ ತೆಗೆದುಹಾಕಲಿ? ಬಾಗಿಲು ವಿಶಾಲವಾಗಿ ತೆರೆದಿದೆ. ಹೋಗುವುದಿದ್ದರೆ ಹೋಗಲಿ, ಯಾರು ತಡೆಯುತ್ತಾರೆ? ಹೋಗುವರು ಹೋಗಬಹುದು, ಬರುವವರು ಬರಬಹುದು ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಹೋಗಿರಲಿಲ್ವಾ? ಮತ್ತೆ ಬಂದು ನಮ್ಮಲ್ಲಿ ಎಮ್‍ಎಲ್‍ಎ ಆದ್ರು. ಅದೇನೋ ಸಿದ್ದರಾಮಯ್ಯ ವಿರುದ್ಧ ಹೌಸಿಂಗ್ ಬೋರ್ಡ್ ಹೋರಾಟ ನಡೆಸ್ತೀನಿ ಅಂದಾಗ ರಕ್ಷಣೆ ಕೊಟ್ಟವರು ಯಾರು? ಪಕ್ಷ ಬಿಟ್ಟು ಹೋದವರ ಕಥೆ ಏನಾಗಿದೆ ಅಂತ ಗೊತ್ತಿದೆ ಎಂದು ಎಚ್‍ಡಿಕೆ ಮಾರ್ಮಿಕವಾಗಿ ಹೇಳಿಕೆ ಕೊಟ್ಟರು.