ಚಿಕ್ಕೋಡಿ: ರಾಜ್ಯದ 25 ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ನಾಯಕರು ಕರಾಳ ದಿನಾಚರಣೆಗೆ ಮುಂದಾಗಿದ್ದರೆ, ಇತ್ತ ಜೆಡಿಎಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ.
ಒಂದೆಡೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಹರಕೆ ತೀರಿಸಲು ಟೆಂಪಲ್ ರನ್ ನಡೆಸಿದ್ದಾರೆ. ಇತ್ತ ಎಚ್‍ಡಿಕೆ ಅಭಿಮಾನಿಗಳು ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ದೇವರಿಗೆ ಹೊತ್ತಿದ್ದ ಹರಕೆ ತೀರಿಸುತ್ತಿದ್ದಾರೆ.
ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ಪ್ರದಕ್ಷಿಣೆ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದ ಪ್ರಭಾಕರ್ ಗಗ್ಗರಿ ಇಂದು ಆ ಹರಕೆಯನ್ನು ತೀರಿಸಿದರು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಶಕ್ತಿ ದೇವತೆ ಚಿಂಚಲಿ ಮಾಯಕ್ಕಾ ದೇವಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಭೇಟಿ ನೀಡಿ, ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾದ್ರೆ ತಾನು ಚಿಂಚಲಿ ಮಾಯಕ್ಕಾ ದೇವಿಗೆ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಇಂದು ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಚಿಂಚಲಿ ಕ್ಷೇತ್ರದ ಹಾಲಹಳ್ಳದಿಂದ ಸುಮಾರು 3 ಕಿ.ಮೀ ದೂರವಿರುವ ಮಾಯಕ್ಕಾ ದೇವಸ್ಥಾನದವರೆಗೂ ದೀರ್ಘದಂಡ ನಮಸ್ಕಾರ ಹಾಕಿ ಪ್ರಭಾಕರ್ ಗಗ್ಗರಿ ತಮ್ಮ ಹರಕೆ ತೀರಿಸಿದ್ದಾರೆ.