ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ, 2ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಜೆ 4.30ಕ್ಕೆ ವಿಧಾನಸೌಧದ ಮುಂದೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಕುಮಾರಸ್ವಾಮಿ ಜೊತೆಗೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ವಜೂಭಾಯ್ ರೂಢಾಬಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಚಿವರು ವಿಶ್ವಾಸಮತ ಯಾಚನೆಯ ಬಳಿಕ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Advertisement
ಪದಗ್ರಹಣ ಸಮಾರಂಭಕ್ಕೆ ವಿಧಾನಸೌಧ ಸಂಪೂರ್ಣ ಸಜ್ಜಾಗಿದೆ. ಬೃಹತ್ ವೇದಿಕೆ, ಎಲ್‍ಇಡಿ ವ್ಯವಸ್ಥೆ, 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಸದನದಲ್ಲಿ ಇದೇ 25ರಂದು ಕುಮಾರಸ್ವಾಮಿ ವಿಶ್ವಾಸಮತಯಾಚಿಸಲಿದ್ದು, ಮೇ 28ರಂದು ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವವರೆಗೆ ಕಾಂಗ್ರೆಸ್ ಶಾಸಕರು ಹಿಲ್ಟನ್ ರೆಸಾರ್ಟ್ ನಲ್ಲಿ, ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. 14 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಜೊತೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ. 2004ರಲ್ಲಿ ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಆಗ ಜೆಡಿಎಸ್‍ನಲ್ಲಿದ್ದ ಸಿದ್ದರಾಮಯ್ಯ ಡಿಸಿಎಂ ಆಗಿದ್ರು.
Advertisement
ಮಾರ್ಗ ಬದಲಾವಣೆ:
ಪದಗ್ರಹಣ ಕಾರ್ಯಕ್ರಮದಿಂದಾಗಿ ಟ್ರಾಫಿಕ್ ಜಾಮ್ ತಪ್ಪಿಸುವ ಸಲುವಾಗಿ ಪೊಲೀಸರು ರಸ್ತೆ ಮಾರ್ಗದಲ್ಲೂ ಬದಲಾವಣೆ ಮಾಡಿದ್ದಾರೆ.
* ಶಿವಾಜಿನಗರ ಕಡೆಯಿಂದ ವಿಧಾನಸೌಧ ಕಡೆ ಬರುವ ವಾಹನಗಳು ಬಾಳಕುಂದ್ರಿ ಸರ್ಕಲ್‍ನಿಂದ ತಿಮ್ಮಯ್ಯ ರಸ್ತೆ ಮೂಲಕ ಚಾಲುಕ್ಯ ಸರ್ಕಲ್‍ಗೆ ಬರತಕ್ಕದ್ದು
* ಮೈಸೂರು ರಸ್ತೆ ಮೂಲಕ ಬರುವವರು ಟೌನ್‍ಹಾಲ್, ಎನ್.ಆರ್ ಜಂಕ್ಷನ್‍ನಿಂದ ಬಲ ತಿರುವು ಪಡೆದು ಹಡ್ಸನ್ ಸರ್ಕಲ್, ಕ್ವೀನ್ಸ್ ಸರ್ಕಲ್, ಅನಿಲ್‍ಕುಂಬ್ಳೆ ಸರ್ಕಲ್‍ನಿಂದ ಆರ್ ಬಿಐ ಜಂಕ್ಷನ್ ಮೂಲಕ ಕೃಷ್ಣ ವಿಹಾರಕ್ಕೆ ಬರಬೇಕು.
* ತುಮಕೂರು ಕಡೆಯಿಂದ ಬರುವವರು ಗೊರಗುಂಟೆಪಾಳ್ಯ ಬಳಿ ಎಡ ತಿರುವು ಪಡೆದು ಬಿಇಎಲ್ ಸರ್ಕಲ್, ಹೆಬ್ಬಾಳ, ಮೇಕ್ರಿ ಸರ್ಕಲ್ ಮೂಲಕ ಪ್ಯಾಲೇಸ್ ಗ್ರೌಂಡ್ ಸೇರಬೇಕು.
* ಕೋಲಾರ ಕಡೆಯಿಂದ ಬರುವವರು ಹಳೇ ಮದ್ರಾಸ್ ರಸ್ತೆ ಮೂಲಕ ರಾಮಮೂರ್ತಿನಗರ ಮಾರ್ಗವಾಗಿ ರಿಂಗ್ ರೋಡ್, ಹೆಬ್ಬಾಳ ಮೂಲಕ ಅರಮನೆ ಮೈದಾನಕ್ಕೆ ಸೇರತಕ್ಕದ್ದು.
Advertisement
Advertisement
ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಇರುವಂತೆಯೇ ಸಮನ್ವಯ ಸಮಿತಿ ಇಲ್ಲದೆಯೇ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಅಧಿಕಾರ ಹಂಚಿಕೆ ನಡೆದಿದೆ. ಈ ಸಂಬಂಧ ಎಚ್‍ಡಿ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿದ್ರು. ಬಳಿಕ ಪ್ರತಿಕ್ರಿಯಿಸಿದ ಕೆಸಿ ವೇಣುಗೋಪಾಲ್, ಸಿಎಂ ಮತ್ತು ಡಿಸಿಎಂ ಮಾತ್ರ ಪ್ರಮಾಣ ವಚನ ಸ್ವೀಕರಿಸ್ತಾರೆ. ಸಚಿವರು ವಿಶ್ವಾಸಮತಯಾಚನೆ ಬಳಿಕ ಪ್ರಮಾಣವಚನ ಸ್ವೀಕರಿಸ್ತಾರೆ. ಸಮನ್ವಯ ಸಮಿತಿಯನ್ನೂ ವಿಶ್ವಾಸಮತಯಾಚನೆ ಬಳಿಕವೇ ರಚಿಸಲಾಗುತ್ತೆ ಅಂದ್ರು.
ಕಾರ್ಯಕ್ರಮಕ್ಕೆ ಗಣ್ಯರ ಆಗಮನ:
ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಸಿಂಗ್ ಯಾದವ್, ಆರ್‍ಜೆಡಿ ಮುಖಂಡ ತೇಜಸ್ವಿ ಯಾದವ್, ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್, ಚಿತ್ರನಟ ಕಮಲಹಾಸನ್ ಸೇರಿದಂತೆ ಹಲವು ಗಣ್ಯರು ಇಂದು ಕುಮಾರಪರ್ವದ ಆರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದು, ಕರ್ನಾಟಕ ಜನತೆ ಉತ್ತಮ ಸರ್ಕಾರವನ್ನೇ ಆಯ್ಕೆ ಮಾಡಿದ್ದಾರೆ ಅಂದ್ರು.